ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ ಸಲ್ಲಿಸಿದ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯವು (ಟ್ರಯಲ್ ಕೋರ್ಟ್) ತಿರಸ್ಕರಿಸಿರುವುದು ಪ್ರಧಾನಿ ಮೋದಿ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡು ರಾಜಕೀಯ ವಿರೋಧಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎನ್ನುವುದನ್ನು ಮತ್ತೊಮ್ಮೆ ಜಗಜ್ಜಾಹೀರಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ ಸಲ್ಲಿಸಿದ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯವು (ಟ್ರಯಲ್ ಕೋರ್ಟ್) ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ನೀಡುತ್ತಿರುವ ಇಂತಹ ಕಿರುಕುಳವನ್ನು ಎದುರಿಸಲು ಸೋನಿಯಾ ಗಾಂಧಿ ಮತ್ತವರ ಕುಟುಂಬದ ಜೊತೆ ನೈತಿಕ ಬೆಂಬಲವಾಗಿ ನಾವು ನಿಂತಿದ್ದೇವೆ, ದೇಶದ ಕೋಟ್ಯಂತರ ಜನರಿದ್ದಾರೆಂದು ಹೇಳಿದರು.
1937 ರಲ್ಲಿ ಜವಾಹರ್ ಲಾಲ್ ನೆಹರೂರವರು ದೇಶದ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಾರಂಭಿಸಿದರು. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ನಂತರ ಈ ಪತ್ರಿಕೆಯನ್ನು ಯಂಗ್ ಇಂಡಿಯನ್ ಸಂಸ್ಥೆ ವಹಿಸಿಕೊಂಡಿತು. ಸಂಸ್ಥೆಗೆ ಸೇರಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಇವರ ಮೇಲೆ ಪ್ರಕರಣ ದಾಖಲಿಸಿ, ಇಡಿ ತನಿಖೆಯನ್ನು ಮಾಡಿಸಲಾಯಿತು.
2012 ರಲ್ಲಿ ಸುಬ್ರಮಣ್ಯಂಸ್ವಾಮಿಯವರು ಇವರ ವಿರುದ್ಧ ದಾವೆ ಹೂಡಿದ್ದರು. ಪ್ರಸ್ತುತ ಇ.ಡಿ ಯವರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ. ಈ ಪ್ರಕರಣವನ್ನು ಸುಳ್ಳು ಎಂದು ನ್ಯಾಯ ಎತ್ತಿಹಿಡಿದಿದೆ ಎಂದು ತಿಳಿಸಿದ್ದಾರೆ.



