ಬೆಂಗಳೂರು; ರಾಜ್ಯ ಸರ್ಕಾರ ಏರಿಸುತ್ತಿರುವ ಬೆಲೆಗಳ ಬಗ್ಗೆ ಬಿಜೆಪಿ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದೆ.
ವಿಧಾನಸಭೆಯಲ್ಲಿಂದು ರಾಜ್ಯಪಾಲರ ಭಾಷಣ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ. ಸಿದ್ದರಾಮಯ್ಯ ಏರಿಸದ ದರಗಳಿಲ್ಲ ಎಂದು ಛೇಡಿಸಿದರು. ನೀರಿನ ದರ, ಕಸದ ಶುಲ್ಕ ಸೇರಿದಂತೆ ಬಿಡಿಎದಲ್ಲಿನ ಎಲ್ಲಾ ದರಗಳು, ಅಫಿಡೆವಿಟ್ ಶುಲ್ಕ ಇತರೆ ದರಗಳು ಏರಿಕೆಯಾಗಿದೆ ಎಂದು ಪ್ರತಿಯೊಂದರ ದರವೂ ಏರಿಕೆಯಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ಖರ್ಗೆ, ಹಾಗೇಯೇ ಚಿನ್ನ ಬೆಳ್ಳಿ ದರ ಪೆಟ್ರೋಲ್ ಡಿಸೇಲ್ ಬಗ್ಗೆಯೂ ಪ್ರಸ್ತಾಪಿಸಿ ಎಂದು ಸುರೇಶ್ಕುಮಾರ್ ಅವರ ಮಾತಿಗೆ ಪ್ರತಿಯಾಗಿ ತಿರುಗೇಟು ನೀಡಿದರು.
ಮುಂದೆ ತಮ್ಮ ಮಾತು ಮುಂದುವರಿಸಿದ ಸುರೇಶ್ಕುಮಾರ್, ಈ ಸರ್ಕಾರ ಸೇಡು ತೀರಿಸಿಕೊಳ್ಳುವ ಸರ್ಕಾರ ಎಂದು ದೂರಿದರು. ಬಳ್ಳಾರಿ ಘಟನೆಯನ್ನು ಪ್ರಸ್ತಾಪಿಸಿ ಘಟನೆಯಲ್ಲಿ ಮರಣಹೊಂದಿದ ರಾಜಕೀಯ ಕಾರ್ಯಕರ್ತನನ್ನು ಹೂಳುವ ಬದಲಿಗೆ ಸುಡಲಾಗಿದೆ. ಆತನ ಸಮುದಾಯ ಪ್ರಕಾರ ಹೂಳುವ ಪದ್ಧತಿಯಿತ್ತು. ಹೂಳುವುದಕ್ಕಾಗಿ ಗುಂಡಿ ತೆಗೆಯಲಾಗಿತ್ತು. ಆದರೆ ಆತನ ಶವವನ್ನು ಸುಡಲಾಗಿದೆ ಎಂದು ಹೇಳಿದ ಅವರು, ಪ್ರತಿಯೊಂದಕ್ಕೂ ರಾಜಕಾರಣವನ್ನು ಮುಂದೆ ತರಲಾಗುತ್ತಿದೆ. ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿ ಇದುವರೆಗೂ ರಾಜ್ಯಕ್ಕೆ ೧೮ ಮಂದಿ ರಾಜ್ಯಪಾಲರು ಬಂದುಹೋಗಿದ್ದಾರೆ. ಬಂದು ಹೋದವರಲ್ಲಿ ಹಲವರನ್ನು ಒಳ್ಳೆಯ ಕಾರ್ಯಕ್ಕಾಗಿ ನೆನಪಿಸಿಕೊಳ್ಳುತ್ತೇವೆ. ಮತ್ತೆ ಕೆಲವರನ್ನು ಬೇರೆ ಬೇರೆ ಕಾರಣಕ್ಕಾಗಿ ನೆನಪಿಸಿಕೊಳ್ಳುತ್ತೇವೆ ಎಂದು ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಈಗ ರಾಜ್ಯಪಾಲರ ಪ್ರಸ್ತಾಪ ಬೇಡ ಎಂದು ಸುರೇಶ್ಕುಮಾರ್ ಅವರ ಮಾತನ್ನು ಬೇರೆಡೆಗೆ ತಿರುಗಿಸಿದರು.
ದರಗಳ ಏರಿಕೆಗೆ ಟೀಕೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುರೇಶ್ಕುಮಾರ್ ಅಸಮಾಧಾನ



