ಬೆಳಗಾವಿ: ಎಸ್ಸಿ, ಎಸ್ಟಿಯ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಮೀಸಲಿಟ್ಟ ಅನುದಾನವನ್ನ ಗ್ಯಾರಂಟಿಗಳಿಗೆ ಬಳಸುವುದು ಸರಿಯಲ್ಲ, ಈ ಹಣವನ್ನ ಗ್ಯಾರಂಟಿಗಳಿಗೆ ಬಳಸಿದರೆ, ಕಾಯ್ದೆಯ ಉದ್ದೇಶವೇ ಹಾಳಾಗಲಿದೆ ಎಂದು ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ವಿಧಾನ ಪರಿಷತ್ನಲ್ಲಿಂದು ವಿಷಯ ಪ್ರಸ್ತಾಪಿಸಿದ ನಾರಾಯಣಸ್ವಾಮಿಯವರ ಮಾತಿಗೆ ಉತ್ತರಿಸಿದ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, 2013-14ರಲ್ಲಿ ಸಿದ್ದರಾಮಯ್ಯನವರ ಕಾಲದಲ್ಲಿ ಎಸ್ಸಿಪಿ/ಟಿಎಸ್ಪಿ ಕಾಯ್ದೆ ಮಾಡಲಾಗಿತ್ತು. ಅಂದಿನಿಂದ ಆಯವ್ಯಯ ಮಾಡುವಾಗ ಯೋಜನಾ ಗಾತ್ರದಲ್ಲಿ ಪ್ರತ್ಯೇಕ ಹಣ ನಿಗದಿ ಮಾಡಲಾಗಿದೆ, ಯಾವ ರೀತಿ ಹಣ ಬಳಕೆ ಮಾಡಬೇಕು ಎಂಬುದನ್ನ 7ಎ,7ಬಿ,7ಸಿ, 7ಡಿ ನಡಿಯಲ್ಲಿ ತಿಳಿಸಲಾಗಿದೆ.
7ಡಿ ಬಿದ್ದಾಗ ತುರ್ತು ಉದ್ದೇಶಕ್ಕೆ ಬಳಸಬಹುದು, ಸೆಕ್ಷನ್ 7ಸಿ ಬಳಸಿಕೊಂಡು ಎಸ್ಸಿ ಎಸ್ಟಿ 1.04 ಕೋಟಿ ಜನ ಸಂಖ್ಯೆ ಇದ್ದಾರೆ, ಇದನ್ನ ಬಳಸಿಕೊಳ್ಳಬಹುದು. ಈಗ 7 ಡಿ ಸೆಕ್ಷನ್ ತೆಗೆದುಹಾಕಿದ್ದೇವೆ. ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಇಲ್ಲ ಎಂದರು.
ಕೋಟಾ ಶ್ರೀನಿವಾಸಪೂಜಾರಿ ಅವರು ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಕೊಡಬೇಕಿದ್ದ ಸವಲತ್ತಿನಲ್ಲಿ ಕಡಿತಗೊಳಿಸಿದ್ದೀರಿ, ಇದಕ್ಕೆ ಕಾರಣ ತಿಳಿಸಿ ಎಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಉತ್ತರಿಸಿ, ಸಮಂಜಸವಾಗಿ ಅಂಕಿ ಸಂಖ್ಯೆಗಳೊಂದಿಗೆ ಉತ್ತರಿಸುತ್ತ ಅಂಬೇಡ್ಕರ್ ಅವರ ಸದಾಶಯಗಳನ್ನು ಹೊಸ ಯೋಜನೆ ರೂಪಿಸುವುದರೊಂದಿಗೆ ಅನುಷ್ಠಾನಗೊಳಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಉತ್ತರಿಸಿದರು.
ಪ್ರಿಯಾಂಕ ಖರ್ಗೆ ಅವರು ಮಾತನಾಡಿ, ಈ ಹಣವನ್ನ ಗ್ಯಾರಂಟಿಗೆ ತರಲು ಸಾಧ್ಯವೇ ಇಲ್ಲ. ಅನ್ನಭಾಗ್ಯ, ಗೃಹಲಕ್ಷ್ಮಿಗೆ ಬಳಸಲು ಆಗೋದೇ ಇಲ್ಲ. ಶಕ್ತಿ ಯೋಜನೆಯಲ್ಲಿ ಹಣ ಕೊಡಬೇಕಾದರೆ ಎಸ್ಸಿ, ಎಸ್ಟಿ ಯಾರನ್ನ ಗುರುತಿಸಬೇಕು. ಇನ್ನು ಗುರುತಿಸಿಲ್ಲ, ಹೀಗಾಗಿ ಹಣ ಬಳಸಿಲ್ಲ, ನಿಮಗೆ ತಪ್ಪು ಕಲ್ಪನೆ ಇದೆ ಎಂದರು.
ಮಹದೇಶಪ್ಪ ಉತ್ತರಿಸಿ, ಈ ಹಣವನ್ನ ಬೇರೆ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ, ಇದು ರಾಜಕೀಯ ಹೇಳಿಕೆ, ಇದು ತಪ್ಪು ತಿಳುವಳಿಕೆ ಆಗಿದೆ. ಈ ಎಸ್ಸಿಪಿ/ಎಸ್ಟಿಪಿ ಹಣ ಬೇರೆ ಕಡೆ ಹೋಗಿಲ್ಲ, ಹೋಗಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.ನಾರಾಯಣ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ನೀವು ಈ ಹಣ ಗ್ಯಾರಂಟಿಗೆ ಬಳಸಲು ಆಗೊಲ್ಲ ಎಂದು ಹೇಳ್ತೀರಿ..! ಆದರೆ ನಿಮ್ಮ ಉತ್ತರದಲ್ಲಿ ಗ್ಯಾರಂಟಿಗಳಿಗೆ ಹಂಚಿರುವ ಬಗ್ಗೆ ಉತ್ತರ ಕೊಟ್ಟಿದ್ದೀರಿ ಎಂದು ಆರೋಪಿಸಿ, ಬಿಜೆಪಿ ಸದಸ್ಯರೊಂದಿಗೆ ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.ಬಿಜೆಪಿಯವರು ಧರಣಿ ನಡೆಸುವ ವೇಳೆ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸಭಾಪತಿಯವರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.