ತುಮಕೂರು: ಮಗ ತನ್ನ ಪತ್ನಿಯೊಂದಿಗೆ ಸೇರಿಕೊಂಡು ಆಸ್ತಿಗಾಗಿ ತನ್ನ ತಾಯಿಯನ್ನೇ ಮನೆಯ ಕೊಠಡಿಯಲ್ಲಿ ಕಳೆದ 11 ತಿಂಗಳಿನಿಂದ ಕೂಡಿ ಹಾಕಿದ ಘಟನೆ ತುಮಕೂರು ನಗರದ ಶಿರಾ ಗೇಟ್ನ ಸಾಡೆಪುರದಲ್ಲಿ ನಡೆದಿದೆ. ಸಿಡಿಪಿಒ ಆಗಿ ನಿವೃತ್ತರಾಗಿದ್ದ ಪಂಕಜಾಕ್ಷಿ (80) ಮಗನಿಂದ ದಿಗ್ಬಂಧನಕ್ಕೊಳಗಾದ ದುರ್ದೈವಿ.
ಸಿಡಿಪಿಒ ಆಗಿ ನಿವೃತ್ತರಾಗಿರುವ ತುಮಕೂರು ನಗರದ ಶಿರಾ ಗೇಟ್ನ ಸಾಡೆಪುರದ ನಿವಾಸಿಯಾಗಿರುವ ಪಂಕಜಾಕ್ಷಿ ಅವರಿಗೆ 50 ಸಾವಿರ ರೂ. ನಿವೃತ್ತಿ ವೇತನ ಬರುತ್ತಿದೆ. ಇದರ ಜೊತೆಗೆ 12 ಮನೆ ಸೇರಿ ಒಟ್ಟು ಆಸ್ತಿಗೆ ಹಕ್ಕುದಾರರಾಗಿದ್ದಾರೆ. ಈ ಆಸ್ತಿಗಾಗಿ ಮಗ ಜೇಮ್ ಸುರೇಶ್ ಹಾಗೂ ಈತನ ಪತ್ನಿ ಆಶಾ, ಪಂಕಜಾಕ್ಷಿ ಅವರಿಗೆಹಿಂಸೆ, ಕಿರುಕುಳ ನೀಡುತ್ತಿದ್ದಾರೆ.
ಅಲ್ಲದೆ, ಕಳೆದ 11 ತಿಂಗಳಿನಿಂದ ಮನೆಯ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.ತನ್ನ ತಾಯಿಗೆ ಬರುತ್ತಿದ್ದ 50 ಸಾವಿರ ರೂಪಾತಿ ನಿವೃತ್ತಿ ವೇತನವನ್ನು ನಾಲ್ವರು ಮಕ್ಕಳು ಬಳಸುತ್ತಿದ್ದರು. ಈಗಾಗಲೇ ತಾಯಿ ಬಳಿ ಇದ್ದ ಒಡವೆಗಳನ್ನು ಕೂಡ ಮಕ್ಕಳು ಪಡೆದಿದ್ದಾರೆ. ಸದ್ಯ ಮನೆಗಳನ್ನ ಮಕ್ಕಳ ಹೆಸರಿಗೆ ಮಾಡಿಕೊಡಲು ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ.
ಮನೆಗೆ ಬೀಗ ಜಡಿದು ದಿಗ್ಬಂದನ ಮಾಡಲಾಗಿತ್ತು. ಸ್ಥಳೀಯರು ಸಖಿ ಸಹಾಯವಾಣಿಗೆ ಈ ಬಗ್ಗೆ ಮಾಹಿತಿ ನೀಡಿದನ್ವಯ ಪೊಲೀಸರು ಹಾಗೂ ಸಾಂತ್ವನ ಕೇಂದ್ರದವರು ಸ್ಥಳಕ್ಕೆ ಆಗಮಿಸಿ ಕ್ರಮ ಜರುಗಿಸಿದ್ದಾರೆ.