ಬೆಂಗಳೂರು: ನಗರದಲ್ಲಿ ಮತ್ತೆ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಬಸವೇಶ್ವರ ನಗರದ ನ್ಯಾಫಲ್ ಹಾಗೂ ವಿದ್ಯಾಶಿಲ್ಪ, ಸದಾಶಿವನಗರದ ನೀವ್ ಅಕಾಡೆಮಿ ಮತ್ತು ಪೂರ್ಣಪ್ರಜ್ಞಾ ಶಾಲೆಗಳು ಸೇರಿದಂತೆ ಯಲಹಂಕ, ಆನೇಕಲ್ ಮತ್ತಿತರರ ಕಡೆ ಇರುವ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.
ಸುಮಾರು 44ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಸಿಂಗೇನ ಅಗ್ರಹಾರದ ಎಬಿನೇಜರ್, ನಾಗದೇವನಹಳ್ಳಿಯ ಚಿತ್ರಕೂಟ, ಚಿತ್ರ ಕೌಶಲ್ಯ ಶಾಲೆಗಳಿಗೆ ಬೆದರಿಕೆ ಮೇಲ್ ಬಂದಿದೆ.ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದು, ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ.
ಇನ್ನು ಆತಂಕಗೊಂಡ ಪೋಷಕರು ಶಾಲೆ ಬಳಿ ಓಡೋಡಿ ಬಂದು ತಮ್ಮ-ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಕಳೆದ 1 ವರ್ಷದಿಂದ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವರ್ಷ ಒಂದೇ ದಿನ 30 ಶಾಲೆಗಳಿಗೆ ಇ-ಮೇಲ್ ಬೆದರಿಕೆ ಹಾಕಲಾಗಿತ್ತು. ಆದರೂ ಸಹ ಈವರೆಗೂ ಬಾಂಬ್ ಬೆದರಿಕೆ ಹಾಕಿರುವವರ ಬಂಧನವಾಗಿಲ್ಲ. ಇದೀಗ ಮತ್ತೆ ಅದೇ ಚಾಳಿ ಮುಂದುವರೆಸಿದ್ದಾರೆ.
ಬಾಂಬ್ ಬೆದರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು, ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದಾರೆ. ಶಾಲೆಗಳಿಗೆ ಬಾಂಬ್ ಪತ್ತೆ ದಳ, ನಿಷ್ಕ್ರಿಯ ದಳವನ್ನು ಕಳಿಸಿದ್ದೇವೆ. ಬೆದರಿಕೆ ಬಂದಿರುವ ಶಾಲೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು
ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಸ್ಕೂಲ್ಗೆ ಇಂದು ಬೆಳಿಗ್ಗೆ ಬಾಂಬ್ ಬೆದರಿಕೆ ಮೇಲ್ ಬಂದಿದೆ ಎಂದು ವೈಟ್ಫೀಲ್ಡ್ ಡಿಸಿಪಿ ಶಿವಕುಮಾರ್ ತಿಳಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಶಾಲೆಗೆ ತೆರಳಿ ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ.
ಬೆದರಿಕೆ ಮೇಲ್ ಮಾಡಿರುವುದು ಮುಜಾಹೀದ್ ಎಂಬ ಹೆಸರಿನಿಂದ ಬಂದಿದ್ದು, ದೊಡ್ಡ ಅನಾಹುತ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ನೀವೆಲ್ಲರೂ ಮತಾಂತರಗೊಳ್ಳಬೇಕು ಇಲ್ಲದೆ ಇದ್ದರೆ ಸಾಯಲು ತಯರಾಗಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಬೆದರಿಕೆ ಬಗ್ಗೆ ಮಾಹಿತಿ ಪಡೆದ ಕೂಡಲೇ ಶಾಲಾ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿ ತಮ್ಮ ಮಕ್ಕಳನ್ನು ಶಾಲೆಯಿಂದ ಕರೆದೊಯ್ಯುವಂತೆ ತಿಳಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಮಕ್ಕಳ ಪೋಷಕರು ಶಾಲೆಗೆ ಧಾವಿಸಿ ಮಕ್ಕಳನ್ನು ಮನೆಗೆ ಕರೆದೊಯ್ದಿದ್ದಾರೆ. ಬಹುತೇಕ ಬೆದರಿಕೆ ಬಂದಿದ್ದ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.ಶಾಲೆಗಳಿಗೆ ಧಾವಿಸಿರುವ ಶ್ವಾನಗಳ ಹಾಗೂ ಬಾಂಬ್ ಪತ್ತೆ ದಳ ಮತ್ತು ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದ್ದಾರೆ.