ಮಿಯಾಮಿ (ಅಮೆರಿಕ): ಭಾರತದ ಖ್ಯಾತ ಆಟಗಾರ ರೋಹನ್ ಬೋಪಣ್ಣ ಮತ್ತು ಆವರ ಆಸ್ಟ್ರೇಲಿಯ ಜತೆಗಾರ ಮ್ಯಾಟ್ ಎಬ್ಡೆನ್ ಅವರು ಮಿಯಾಮಿ ಓಪನ್ ಟೆನಿಸ್ ಕೂಟದ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಅವರು ವಿಶ್ವದ ನಂಬರ್ ವನ್ ಸ್ಥಾನಕ್ಕೆ ಮರಳಿದ ಸಾಧನೆ ಮಾಡಿದ್ದಾರೆ.
ಈ ವರ್ಷ ತಮ್ಮ ಶ್ರೇಷ್ಠ ನಿರ್ವಹಣೆ ಯನ್ನು ಮುಂದುವರಿಸಿದ 44ರ ಹರೆಯದ ಬೋಪಣ್ಣ ಮತ್ತು ಎಬ್ಡೆನ್ ಅವರು ಕ್ರೊವೇಶಿಯದ ಐವಾನ್ ಡೊಡಿಗ್ ಮತ್ತು ಅಮೆರಿಕದ ಆಸ್ಟಿನ್ ಕ್ರ್ಯಾಯಿಸೆಕ್ ಅವರನ್ನು 6-7 (3), 6-3, 10-6 ಸೆಟ್ಗಳಿಂದ ಉರುಳಿಸಿ ಪ್ರಶಸ್ತಿ ಗೆದ್ದರು.
ಈ ಗೆಲುವಿನಿಂದ ಬೋಪಣ್ಣ ಅವರು ಎಟಿಪಿ ಮಾಸ್ಟರ್ 1000 ಕೂಟದ ಪ್ರಶಸ್ತಿ ಗೆದ್ದ ಅತೀ ಹಿರಿಯ ಆಟಗಾರರೆಂಬ ದಾಖಲೆಯನ್ನು ಮತ್ತೆ ತನ್ನ ಹೆಸರಿಗೆ ಬರೆಸಿಕೊಂಡರು. ಅವರು ತನ್ನ 43ರ ಹರೆಯದಲ್ಲಿ ಕಳೆದ ವರ್ಷ ಇಂಡಿಯನ್ ವೆಲ್ಸ್ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಮಾಸ್ಟರ್ 1000 ಪ್ರಶಸ್ತಿ ಗೆದ್ದ ಹಿರಿಯ ಆಟಗಾರರೆಂಬ ದಾಖಲೆ ಮಾಡಿದ್ದರು. ಈ ಸಾಧನೆಯಿಂದ ಅವರು ಡಬಲ್ಸ್ ರ್ಯಾಂಕಿಂಗ್ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದರು.