ಮಾನವನ ದೇಹ ದೇಗುಲವಿದ್ದಂತೆ. ದೇಗುಲ ಎಂದ ಮೇಲೆ ಅಲ್ಲಿ ಸ್ವಸ್ಥ್ಯ ಹಾಗು ಸ್ವಚ್ಛತೆ ಇರಬೇಕು. ತನು ಮನ ಎರಡೂ ಶುದ್ಧವಾಗಿರಬೇಕು. ನಮ್ಮ ದೇಹವು ದೈನಂದಿನ ಚಟುವಟಿಕೆಗಳಲ್ಲಿ ಬಹಳ ಶ್ರಮ ವಹಿಸುತ್ತದೆ. ನಾವು ತಿಂದ ಆಹಾರವಾಗಲಿ, ಕುಡಿದ ನೀರಾಗಲಿ ಅಗತ್ಯವಾದದ್ದನ್ನು ದೇಹಕ್ಕೆ ಸೇರಿ ಬೇಡವಾದ್ದು ದೇಹದಿಂದ ಹೊರದೂಡಲ್ಪಡುತ್ತದೆ.
ಬೆವರಿನ ಮೂಲಕ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತದೆ. ಆಗ ಅಹಿತವಾದ ವಾಸನೆಯೂ ಸಹ ಹೊರಹೊಮ್ಮುತ್ತದೆ. ಇದರಿಂದ ಅಕ್ಕ ಪಕ್ಕ ಇರುವವರಿಗೆ ಅಸಹ್ಯಭಾವ ಮೂಡುತ್ತದೆ ಹಾಗಾಗಿ ಮೊದಲು ನಾವು ದೇಹ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ದಿನಾ ಸ್ನಾನ ಮಾಡಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಹಿತಮಿತವಾದ ಆಹಾರ ಸೇವನೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಬೇಕು. ನಮ್ಮ ದೇಹಕ್ಕೆ ಬೇಕಾದಷ್ಟು ಮಾತ್ರ ತಿನ್ನಬೇಕು. ಅತಿಯಾಗಿ ತಿಂದರೆ ಅಜೀರ್ಣವಾಗಿ ದೇಹದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಸೊಪ್ಪು ತರಕಾರಿಗಳು ಬಹಳ ಆರೋಗ್ಯಕರವಾದ ತಿನಿಸುಗಳು. ದಿನನಿತ್ಯ ಬಳಕೆಯಲ್ಲಿ ಇದನ್ನು ಬಳಸಿದಾಗ ನಮಗೆ ಪೌಷ್ಟಿಕಾಂಶದ ಕೊರತೆಯಿರುವುದಿಲ್ಲ. ಹಾಲು ಮಜ್ಜಿಗೆ ದೇಹಕ್ಕನುಗುಣವಾಗಿ ಸೇವಿಸಿ ದಾಗ ನಮ್ಮ ಆರೋಗ್ಯ ಹಿಡಿತದಲ್ಲಿರುತ್ತದೆ.
ಮನು ಜರು ಒಬ್ಬರಿಗಿಂತ ಒಬ್ಬರು ವಿಭಿನ್ನರು. ಎಲ್ಲರೂ ಎಲ್ಲಾ ತರಹದ ಆಹಾರ ತಿನ್ನಲು ಬಯಸುವುದಿಲ್ಲ ಹಾಗು ಕೆಲವು ಪದಾರ್ಥಗಳು ಕೆಲವರಿಗೆ ಅಲರ್ಜಿಯಾಗುವ ಸಂಭವ ಹೆಚ್ಚು. ಹೀಗಾದಾಗ ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬಂದರೆ ಅಂತಹ ಪದಾರ್ಥಗಳಿಂದ ದೂರವಿರಬೇಕು. ಬಲವಂತವಾಗಿ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಅದನ್ನು ಉಪಯೋಗಿಸದೆ ಇದ್ದರೆ ಕ್ಷೇಮ.
ಆಯಾ ಪ್ರಾಂತ್ಯದಲ್ಲಿ ಸಿಗುವ ಹಣ್ಣು ಆಹಾರಗಳಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕಾಲಕ್ಕನುಗುಣವಾಗಿ ಸಿಗುವ ಹಣ್ಣು ಹಂಪಲುಗಳನ್ನು ತಿನ್ನಲೇಬೇಕು. ಏಕೆಂದರೆ ಅದರಲ್ಲಿ ಶರೀರಕ್ಕೆ ಬೇಕಾಗುವ ಔಷಧಿ ಗುಣಗಳು ನಮ್ಮ ದೇಹ ಸೇರಿ ಆರೋಗ್ಯ ಕಾಪಾಡುವಲ್ಲಿ ಸಹಾಯಮಾಡುತ್ತದೆ.ಪೌಷ್ಠಿಕ ಆಹಾರದ ಜೊತೆಗೆ ವಾಕಿಂಗ್, ವ್ಯಾಯಾಮ, ಯೋಗ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮೊದಲಿಂದಲೂ ಯೋಗಾಸನ ಮಾಡಿ ಅಭ್ಯಾಸವಿದ್ದರೆ ಮುಂದುವರೆಸಿಕೊಂಡು ಹೋಗುವುದರಲ್ಲಿ ಯಾವ ತೊಂದರೆಯೂ ಇಲ್ಲ. ನಲವತ್ತರ ನಂತರ ಯೋಗಾಭ್ಯಾಸ ಮಾಡಲು ಶುರು ಮಾಡಿದರೆ ಬಹಳ ಕ್ಲಿಷ್ಟಕರವಾದ ಆಸನಗಳನ್ನು ಮಾಡುವಾಗ ಬಹಳ ಜಾಗರೂಕರಾಗಿರಬೇಕು. ತರಭೇತಿದಾರರಿಗೆ ತಮ್ಮ ದೇಹದಾರೋಗ್ಯದ ಬಗ್ಗೆ ಹೇಳಿದರೆ ಅವರು ಅದಕ್ಕನುಸಾರವಾಗಿ ಹೇಳಿಕೊಡುತ್ತಾರೆ.
ದೇಹದಾರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಮನಸು ವಿಚಲಿತಾವಾಗದೆ ಸಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಸದಾ ಸಕಾರಾತ್ಮಕವಾಗಿ ಚಿಂತಿಸಬೇಕು. ಕೋಪ ತಾಪ, ತಕ್ಷಣ ಪ್ರತಿಕ್ರಿಯಿಸುವುದು ಮಾನಸಿಕವಾಗಿ ಕುಗ್ಗಿಹೋಗಬಹುದು. ಹಾಗಾಗಿ ಧ್ಯಾನ, ಪ್ರಾಣಾಯಾಮ ಮೊದಲಾದವುಗಳು ಮನಸನ್ನು ಸಂತಸದಲ್ಲಿರುವಂತೆ ಮಾಡುತ್ತದೆ. ಯಾವುದೇ ಸಂದರ್ಭದಲ್ಲಿಯೂ ಸಮಚಿತ್ತದಿಂದಿರುವುದು ಬಹಳ ಮುಖ್ಯ. ಆಧ್ಯಾತ್ಮಿಕ ವಿಚಾರಗಳು, ಸತ್ಸಂಗ, ಸುವಿಚಾರಗಳು ಮನಸಿನ ಆರೋಗ್ಯವು.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇದೆ. ನಮ್ಮ ದೇಹಕ್ಕಾಗಲಿ ಮನಸಿಗಾಗಲಿ ಏನೇ ಆದರೂ ನಮಗೆ ಮಾತ್ರ ತಿಳಿಯುತ್ತದೆ. ಹಾಗಾಗಿ ದೇಹ ಹಾಗು ಮನಸಿನ ಸ್ವಾಸ್ಥ್ಯ ಕಾಪಾಡಿಕೊಂಡು ಹೋಗುವುದು ನಮ್ಮ ಕಾಳಜಿಯಾಗಿರುತ್ತದೆ.ದೇಹದಲ್ಲಿ ಆರೋಗ್ಯದ ಏರುಪೇರಾದಾಗ ನಮಗೆ ತಿಳಿಯುತ್ತದೆ. ಯಾವುದರಿಂದ ಏರುಪೇರಾಗಿರುವುದು ಎಂದು ತಿಳಿಯುತ್ತದೆ. ಆದರೆ ಮಾನಸಿಕವಾಗಿ ಆರೋಗ್ಯ ಹದಕೆಟ್ಟಿದಾಗ ಮೊದಲು ಯಾವ ಕಾರಣಕ್ಕಾಗಿ ಮನಸಿಗೆ ನೆಮ್ಮದಿ ಇಲ್ಲ ಎಂದು ತಿಳಿದುಕೊಳ್ಳಬೇಕು. ಆ ವಿಷಯಗಳಿಂದ ದೂರವಿರಬೇಕು. ಸದಾ ಸಮಚಿತ್ತದಿಂದ ಇರಲು ಪ್ರಯತ್ನ ಪಡಬೇಕು. ಧೈರ್ಯದಿಂದ ಮುನ್ನುಗ್ಗುವ ಪ್ರವೃತ್ತಿ ಹೊಂದಿರಬೇಕು.
ಎಲ್ಲಾ ವಯಸಿನಲ್ಲೂ ಆರೋಗ್ಯ ಬಹಳ ಮುಖ್ಯ. ವಯಸ್ಸಾದಂತೆಲ್ಲ ನಿಶ್ಯಕ್ತಿ ಹೊಂದಿದಾಗ ವೈದ್ಯರಲ್ಲಿ ತಪ್ಪದೆ ತಪಾಸಣೆ ಮಾಡಿಸಿಕೊಳ್ಳಬೇಕು. ವರ್ಷಕ್ಕೊಮ್ಮೆ ಪೂರ್ತಿ ದೇಹದ ತಪಾಸಣೆ ಮಾಡಿಸಿಕೊಳ್ಳುತಿದ್ದರೆ ಆರೋಗ್ಯ ಕಾಪಾಡಿಕೊಂಡು ಬರಬಹುದು. ವೈದ್ಯರು ಸಲಹೆ ನೀಡಿದ ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳಬೇಕು.
ತನು ಮನ ಎರಡರ ಆರೋಗ್ಯವನ್ನು ಸದಾ ಚೆನ್ನಾಗಿ ಇಟ್ಟುಕೊಳ್ಳಲು ಸ್ನೇಹ, ಪ್ರೀತಿ, ವಿಶ್ವಾಸ, ನಗು, ತಾಳ್ಮೆ, ದಾನ, ಕರುಣೆ ಇವೇ ಟಾನಿಕ್ ಹಾಗು ಗುಳಿಗೆಗಳು. ಇದೆಲ್ಲಾ ನಮ್ಮ ಬಳಿಯೇ ಇರುತ್ತದೆ. ಎಲ್ಲರೊಂದಿಗೆ ಇವುಗಳನ್ನು ಹಂಚಿಕೊಂಡಾಗ ಸಹಜವಾಗಿಯೇ ಒಳ್ಳೆಯ ಆರೋಗ್ಯ ಕಂಡುಕೊಳ್ಳುವಲ್ಲಿ ಸಂದೇಹವಿಲ್ಲ.
ಚಂಪಾ ಚಿನಿವಾರ್ ಆಪ್ತಸಮಾಲೋಚಕಿ