ದೇವನಹಳ್ಳಿ: ಸಮ ಸಮಾಜದ ನಿರ್ಮಾಣಕ್ಕೆ ಕ್ರಾಂತಿಯನ್ನೇ ಮಾಡಿದ ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಬಸವ ತತ್ವಗಳ ಪ್ರಚಾರ, ಪ್ರಸಾರ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬಸವೇಶ್ವರ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ದೇವನಹಳ್ಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣ
ದಲ್ಲಿ ನಡೆದ ವಿಶ್ವಗುರು ಬಸವೇಶ್ವರರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣಿಗಾಗಿ, ಹೊನ್ನಿಗಾಗಿ, ಮಣ್ಣಿಗಾಗಿ ಜಗತ್ತಿನಲ್ಲಿ ಕ್ರಾಂತಿ ಆಗಿದೆ. ಆದರೆ ಸರ್ವರ ಸಮಾನತೆಗಾಗಿ ಯಾವುದಾದರೂ ಕ್ರಾಂತಿ ನಡೆದಿದ್ದರೆ ಅದು ಕಲ್ಯಾಣದ ಕ್ರಾಂತಿ ಮಾತ್ರ ಎಂದು ಹೇಳಿದರು.12ನೇ ಶತಮಾನದಲ್ಲಿ ಮನುಷ್ಯರನ್ನು ಮನುಷ್ಯರಂತೆ ಕಾಣುತ್ತಿರಲಿಲ್ಲ. ಮೌಢ್ಯತೆ, ಅನಕ್ಷರತೆ ಇದ್ದು ಹೆಣ್ಣಿಗೆ ಸಮಾನತೆ ಇರಲಿಲ್ಲ. ಅಂತಹ ಕಾಲಘಟ್ಟದಲ್ಲಿ ಸ್ವಾತಂತ್ರ÷್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆಯ ತಳಹದಿಯ ಮೇಲೆ ಬಲಿಷ್ಠ ಸುಂದರ ಸಮಾಜದ ನಿರ್ಮಾಣಕ್ಕೆ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕತೆಯ ತಳಹದಿಯ ಮೇಲೆ ಕ್ರಾಂತಿ ನಡೆಯಿತು. ಶ್ರೇಣಿರಹಿತ, ವರ್ಗರಹಿತ, ಲಿಂಗಭೇದ ರಹಿತ ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಶ್ರಮಿಸಿದರು ಎಂದರು.ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳಿನ ಕಲ್ಪನೆಯನ್ನು ನೀಡಿ, ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪ ಸ್ಥಾಪಿಸಿದರು. ಅಲ್ಲಿ 770 ವಿವಿಧ ವೃತ್ತಿಯ, ವಿವಿಧ ಸಮುದಾಯದ ಅಮರಗಣಂಗಳು ಪಾಲ್ಗೊಳ್ಳುತ್ತಿದ್ದರು. ಅವರೆಲ್ಲರೂ ವಚನಗಳನ್ನು ರಚಿಸಿದ್ದಾರೆ. ಪ್ರಜಾಪ್ರಭುತ್ವದ ಪರಿಕಲ್ಪನೆಗೆ ತಳಹದಿಯಾದ ಅನುಭವ ಮಂಟಪ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿದೆ ಎಂದರು. ಇತ್ತೀಚೆಗೆ ಆಧುನಿಕ ಅನುಭವ ಮಂಟಪ ಕಾಮಗಾರಿಗೆ 105 ಕೋಟಿ ಬಿಡುಗಡೆ ಮಾಡುವುದರೊಂದಿಗೆ ಈವರೆಗೆ 280 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷದೊಳಗೆ ಇದರ ಲೋಕಾರ್ಪಣೆ ಮಾಡಲಾಗುವುದು ಎಂದರು.ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ* ಅವರು ಕಾರ್ಯಮಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸವಣ್ಣನವರ ಚಿಂತನೆಗಳನ್ನು ಚಿಕ್ಕ ವಯಸ್ಸಿನಲ್ಲೆ ಮನಗಂಡು ಮೈಗೂಡಿಸಿಕೊಂಡೆ, ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರ ಬಗ್ಗೆ ಹೆಚ್ಚಿನ ಪಾಠ ಕಲಿತು ಆ ದಾರಿಯಲ್ಲೆ ನಡೆಯುವಂತ ಕೆಲಸ ಮಾಡುತ್ತಿದ್ದೇನೆ. ಎಲ್ಲ ದೇವರುಗಳಿಗಿಂತ ಮೇಲು ದೇವರು ಬಸವಣ್ಣನವರು, 12 ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಸಮಾಜದ ಸುಧಾರಣೆ, ಮಾನವತವಾದವನ್ನು ಪ್ರತಿಪಾದಿಸಿದಂತಹ ಮಹಾನ್ ಚೇತನ ಬಸವಣ್ಣನವರು, ಅವರ ವಚನಗಳು, ಆದರ್ಶಗಳು, ಕಾಯಕ ನಿಷ್ಟೆ ಎಂದೆಂದಿಗೂ ಶಾಶ್ವತ ಎಂದು ಹೇಳಿದರು.ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಕೆ ಸುಧಾಕರ್ ಮಾತನಾಡಿ ಬಸವಣ್ಣನವರು ಕಾಯಕವೇ ಕೈಲಾಸವೆಂದರು. ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶವನ್ನು ನೀಡಿದ ಮಹಾನ್ ದಾರ್ಶನಿಕ ಬಸವಣ್ಣ ಅವರ ಆದರ್ಶಗಳು ನಮ್ಮ ಸಮಾಜಕ್ಕೆ ಸದಾ ದಾರಿದೀಪವಾಗಿವೆ. ವಚನಗಳನ್ನು ಬರೆಯುವುದರ ಜೊತೆಗೆ ವಚನದಲ್ಲಿರುವಂತೆ ಪಾಲಿಸಿದ್ದರು. ಬಸವಣ್ಣನವರ ಆದರ್ಶಗಳನ್ನು ಪಾಲಿಸಬೇಕು. ಪ್ರತಿದಿನದ ಮಾಡುವ ಕೆಲಸದಲ್ಲಿ ಬಸವಣ್ಣನವರನ್ನು ಕಾಣಬೇಕು. ಬಸವಣ್ಣನವರು ಆಚರಣೆಗೆ ತಂದ ದಾಸೋಹವು ಈಗ ತ್ರಿವಿಧವಾದ ಶಿಕ್ಷಣ, ಆರೋಗ್ಯ, ಅನ್ನ ದಾಸೋಹಗಳಾಗಿ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದಿದೆ.ಪ್ರತಿಮೆ ವಿಶೇಷತೆ*: ಜಿಲ್ಲಾಡಳಿತ ಭವನ ಆವರಣದಲ್ಲಿ ಲೋಕಾರ್ಪಣೆಗೊಂಡ ಬಸವಣ್ಣ ಅವರ ಪ್ರತಿಮೆಯಲ್ಲಿ ಮಂಟಪ 28 ಅಡಿ. ಕಂಚಿನ ಪ್ರತಿಮೆ 5 ಅಡಿ ಉದ್ದವಾಗಿದ್ದು 450 ಕೆಜಿ ಕಂಚು ಬಳಕೆ ಮಾಡಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಪಾಲಪನಹಳ್ಳಿ ಮಠದ ಶ್ರೀ ಸಿದ್ದರಾಜುಸ್ವಾಮಿಗಳು, ಐದನೇ ಹಣಕಾಸು ಆಯೋಗದ ಅಧ್ಯಕ್ಷರಾದ ನಾರಾಯಣಸ್ವಾಮಿ, ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ, ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಡಾ ಕೆ.ಎನ್ ಅನುರಾಧ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ಬಯಪ ಅಧ್ಯಕ್ಷ ವಿ.ಶಾಂತಕುಮಾರ್,ಶ್ರೀ ಜಗಜ್ಯೋತಿ ಬಸವೇಶ್ವರ ಪ್ರತಿಮೆ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಬಿ. ಮಂಜುನಾಥ್,ಅಧ್ಯಕ್ಷರಾದ ಎಸ್.ರಮೇಶ್, ಉಪಾಧ್ಯಕ್ಷರಾದ ಕೆ .ಎಸ್ ಜಗದೀಶ್ ,ಪ್ರಧಾನ ಕಾರ್ಯದರ್ಶಿ ಎಸ್. ವಿಜಯ್ ಕುಮಾರ್ ,ಖಜಾಂಚಿ ಎಸ್ .ನಾಗೇಶ್, ಸದಸ್ಯರುಗಳಾದ ಸಿ. ವಿರೂಪಾಕ್ಷಯ್ಯ ಶಾಸ್ತ್ರೀ ,ಎಸ್. ವಿರೂಪಾಕ್ಷಯ್ಯ ,ಎಮ್ .ಸತೀಶ್ ಕುಮಾರ್, ಎಸ್. ಭಾಸ್ಕರ್ ,ಎಸ್.ಪಿ.ಬಸವರಾಜ್ ,ಎಚ್. ಗುರುಬಸಪ್ಪ
,ಎಂ .ಸುಜಯ್, ಬಿ .ವಿ ನಾಗರಾಜಪ್ಪ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ಲೋಕಾರ್ಪಣೆ ಬಸವಣ್ಣನವರ ತತ್ವಗಳು ಸಾರ್ವಕಾಲಿಕ: ಸಚಿವ ಈಶ್ವರ ಖಂಡ್ರೆ



