ತುಮಕೂರು: ರಾಜ್ಯ ಬಿಜೆಪಿಯಲ್ಲಿ ತೀವ್ರವಾಗಿ ಅಸಮಾಧಾನಗೊಂಡಿರುವ ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ವಿ. ಸೋಮಣ್ಣ ಅವರ ರಾಜಕೀಯ ನಡೆಯತ್ತ ಎಲ್ಲರ ಚಿತ್ತ ನಾಟಿದೆ.
ಸೋಮಣ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಯತ್ನಪಟ್ಟಿದ್ದು, ಅವರು ಎರಡು ಬಾರಿ ಸೋಮಣ್ಣ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಅವರ ಕರೆಗೆ ಸೋಮಣ್ಣ ಸ್ಪಂದಿಸಿಲ್ಲ.
ಬಿ.ವೈ. ವಿಜಯೇಂದ್ರ ಅವರು ಇದೇ ಪರಿಸ್ಥಿತಿಯಾಗಿದ್ದು, ಸೋಮಣ್ಣ ಅವರು ಮುಂದೆ ಯಾವ ನಿಲುವು ತಳೆಯುತ್ತಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಸೋಮಣ್ಣ ಅವರಿಗೆ ನಾನೇ ಎರಡು ಬಾರಿ ಕರೆ ಮಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತೇನೆ. ಬರದೆ ಹೋದರೆ ಏನು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಸೋಮಣ್ಣ ತಮ್ಮ ಬೇಸರವನ್ನು ಸಿದ್ದಲಿಂಗ ಸ್ವಾಮೀಜಿ ಬಳಿ ಹಂಚಿಕೊಂಡಿದ್ದಾರೆ.ಗೋವಿಂದರಾಜನಗರ ಬಿಟ್ಟು ಚಾಮರಾಜನಗರ, ವರುಣಾದಲ್ಲಿ ಸ್ಪರ್ಧೆ ಮಾಡಿದ್ದೇ ನನ್ನ ಮಹಾ ಅಪರಾಧವಾಯ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು.
ಎರಡು ಗಂಟೆ ಮನೆಯಲ್ಲಿ ಕುಳಿತುಕೊಂಡಿದ್ದರು, ಆಗಲ್ಲ ಅಂತಾ ಹೇಳಿದ್ದೆ. ಪ್ರಧಾನಿ ಮೋದಿಯವರು ದೆಹಲಿಗೆ ಕರೆಸಿ ನೀನು ಸ್ಪರ್ಧೆ ಮಾಡು ಅಂದರು, ಏನ್ಮಾಡಲಿ” ಎಂದು ಬೇಸರ ವ್ಯಕ್ತಪಡಿಸಿದರು. ಈ ಮೂಲಕ ತಾವು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವೇನು ಎಂಬುವುದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.ಈ ವೇಳೆ ವಿ ಸೋಮಣ್ಣ ಅವರಿಗೆ ಪತ್ನಿ ಶೈಲಜಾ, ಪುತ್ರ ಡಾ.ಅರುಣ್ ಮತ್ತು ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಿಸೆಂಬರ್ 7, 8, 9, 10ರೊಳಗೆ ದೆಹಲಿಗೆ ಹೋಗಿ ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಶಾಸಕ ಅರವಿಂದ ಬೆಲ್ಲದ್, ಶಾಸಕ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಹೈಕಮಾಂಡ್ ಬಳಿ ನಮ್ಮ ನೋವು ಹೇಳುತ್ತೇವೆ. ನಾವು ಹಿರಿಯರು ನಮ್ಮದೇ ಆದ ಅನುಭವ, ಸೇವೆ, ಆಲೋಚನೆ ಇದೆ. ಅದನ್ನೆಲ್ಲ ಹೈಕಮಾಂಡ್ ನಾಯಕರ ಮುಂದೆ ಹೇಳುತ್ತೇವೆ ಎಂದು ವಿ ಸೋಮಣ್ಣ ಹೇಳಿದರು.
ಡಿಸೆಂಬರ್ 6 ರಂದು ಸಿದ್ಧಗಂಗಾ ಮಠದ ಆವರಣದಲ್ಲಿ ಗುರುಭವನ ಉದ್ಘಾಟನೆ ಇದೆ. ನಾನು ಸಿದ್ಧಗಂಗಾ ಮಠದ ಭಕ್ತ, 44 ವರ್ಷಗಳ ಸಂಬಂಧ ನನ್ನದು. ಸಿದ್ಧಗಂಗಾ ಮಠದಲ್ಲಿ ಗುರುಭವನ ನಿರ್ಮಾಣ ಮಾಡುವ ಪುಣ್ಯ ಸಿಕ್ಕಿದೆ. ಕಾರ್ಯಕ್ರಮಕ್ಕೆ ಈ ಭಾಗದ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ಕಾರ್ಯಕ್ರಮಕ್ಕೆ ಸಚಿವರಾದ ಡಾ.ಪರಮೇಶ್ವರ್, ರಾಜಣ್ಣ ಬರಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ ಎಂದರು.ಒಟ್ಟಾರೆ ರಾಜಕೀಯವಾಗಿ ಸೋಮಣ್ಣ ಯಾವ ನಿಲುವು ತಳೆಯುತ್ತಾರೆ ಎಂಬುದು ಡಿ.6ರ ನಂತರ ಬಹಿರಂಗವಾಗಲಿದೆ.