ಬೆಂಗಳೂರು: ನಾವು ಮೋದಿ ಅವರ ಅಭಿವೃದ್ಧಿ ಕಾರ್ಯ ಗಳ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೊಡುವ ಒಂದೊಂದು ಮತವೂ ಆರ್ಥಿಕ ದಿವಾಳಿತನ, ಭ್ರಷ್ಟಾಚಾರ, ದೇಶದ ಅಭದ್ರತೆಗೆ ಕೊಡುವ ಮತ ಆಗುತ್ತೆ ಎಂದು ಕಾಂಗ್ರೆಸ್ ವಿರುದ್ಧಕಿಡಿ ಕಾರಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಡೆಯುತ್ತಿದೆ ಅನ್ನೋದನ್ನ ಕಾಂಗ್ರೆಸ್ ನಾಯಕರು ಮರೆತುಹೋಗಿದ್ದಾರೆ ಅನ್ನಿಸ್ತಿದೆ. ರಾಹುಲ್ ನಾಯಕತ್ವ ವಿಫಲವಾಗಿದೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ವಿಶ್ವಾಸ ಇಲ್ಲ, ಹಾಗಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಕಳೆದ 10 ತಿಂಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ ಹೇಳಲಿ? ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ಎಕ್ಸ್ ಖಾತೆಯಲ್ಲಿ ಮಾತ್ರ ಉದ್ಯೋಗ ಸೃಷ್ಟಿ ಆಗ್ತಿದೆ ಅಷ್ಟೇ. ಒಂದೇ ಒಂದು ಉದ್ಯೋಗ ಕೊಟ್ಟಿಲ್ಲ ಎಂದು ಕಿಡಿ ಕಾರಿದ್ದಾರೆ.ಮೋದಿ ಅವರಿಗೆ 2 ಕೋಟಿ ಉದ್ಯೋಗ ಎಲ್ಲಿ ಎಂದು ಕೇಳ್ತಿದ್ದಾರೆ?
ದೇಶದಲ್ಲಿ 7 ಕೋಟಿ ಹೊಸ ಉದ್ಯೋಗ ಭವಿಷ್ಯ ನಿಧಿ ಅಡಿ ಸೃಷ್ಟಿ ಆಗಿದೆ. ಹೆಚ್ಎಎಲ್ ಮುಚ್ಚಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದ್ರೆ ಅಲ್ಲಿ 84,000 ಕೋಟಿ ಕೆಲಸ ಆಗಿದೆ.
ಈಗ 54,000ಕೋಟಿ ರೂ. ವೆಚ್ಚದ ಕೆಲಸ ಅಲ್ಲಿ ನಡೆಯುತ್ತಿದೆ. ಈಗ ರಾಹುಲ್ ಗಾಂಧಿ ಕ್ಷಮೆ ಕೇಳ್ತಾರಾ? ಅಥವಾ ಡಿಕೆಶಿ ಅವರಿಂದ ಕ್ಷಮೆ ಕೇಳಿಸುತ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರದಿಂದ ಕೊಡಬೇಕಿರುವ ಹಣ ರೈತರಿಗೆ ಕೊಟ್ಟಿಲ್ಲ. ಇದು ದಿವಾಳಿಯಾಗಿರುವ ಸರ್ಕಾರ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕೊಡುವ ಮತ ಆರ್ಥಿಕ ದಿವಾಳಿತನಕ್ಕೆ ಕೊಡುವ ಮತ, ಕಾಂಗ್ರೆಸ್ ಗೆ ಕೊಡುವ ಮತ ಭ್ರಷ್ಟಾಚಾರಕ್ಕೆ ಕೊಡುವ ಮತ, ಕಾಂಗ್ರೆಸ್ಗೆ ಕೊಡುವ ಮತ ದೇಶದ ಅಭದ್ರತೆಗೆ ನೀಡುವ ಮತ ಆಗುತ್ತೆ ಅಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ ಬಿಎಸ್ವೈ, ಒಕ್ಕಲಿಗ ಸಿಎಂ ತೆಗೆದವರು ಯಾರೆಂದು ಸ್ವಾಮೀಜಿ ಅವರ ಹತ್ರ ಹೋಗಿ ಅವರೇ ಕೇಳಲಿ, ಅವರೇ ಹೇಳಲಿ. ಡಿ.ಕೆ.ಶಿವಕುಮಾರ್ ಇಂತದ್ದನ್ನ ಬಿಟ್ಟು ಬೇರೆನೂ ಹೇಳಲು ಸಾಧ್ಯ? ಒಕ್ಕಲಿಗ ಸಮುದಾಯ ಒಗ್ಗಟ್ಟಾಗಿದ್ದಾರೆ, ನಮ್ಮ ಜೊತೆ ಇದ್ದಾರೆ ಎಂದು ತಿಳಿಸಿದ್ದಾರೆ.ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಸುಳ್ಳು ಆಶ್ವಾಸನೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ಬಿಜೆಪಿ
400ಕ್ಕೂ ಹೆಚ್ಚು ಸೀಟು ಗೆದ್ದು, ರಾಜ್ಯದಲ್ಲಿ 28 ಕ್ಷೇತ್ರ ಗೆದ್ದು ಸಂಸದರನ್ನ ದೆಹಲಿಗೆ ಕರೆದುಕೊಂಡು ಹೋಗ್ತೀನಿ ಎಂದು ಸವಾಲ್ ಹಾಕಿದ್ದಾರೆ.