ಬೆಂಗಳೂರು: ಬಿಜೆಪಿ ವತಿಯಿಂದ ಕಾಂಗ್ರೆಸ್ ಶಾಸಕರ ಆಪರೇಷನ್ ಕಮಲ ಕಾರ್ಯಾಚರಣೆ ನಡೆದಿಲ್ಲ. ಈ ಬಗ್ಗೆ ಬೇಕಾದರೆ ತನಿಖೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ ಸಂಬಂಧ ಮುಖ್ಯಮಂತ್ರಿಯವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.ರಾಜ್ಯದ ಶಾಸಕರಿಗೆ 2 ಕೋಟಿ. ರೂಪಾಯಿ ಅನುದಾನ ನೀಡಬೇಕಾಗಿತ್ತು. ಆದರೆ ಕೇವಲ 50 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ.
ರಾಜ್ಯ ಸರ್ಕಾರ ಜನರಿಗೆ ನೀಡಿದ ಆಶ್ವಾಸನೆ ಈಡೇರಿಸಲು ಪರದಾಡುತ್ತಿದೆ ಎಂದು ದೂರಿದ್ದಾರೆ.ರಾಜ್ಯದ ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಉಚಿತ ವಿದ್ಯುತ್ ಕೊಡುವುದಾಗಿ ಹೇಳಿ ದರ ಹೆಚ್ಚಳ ಮಾಡಲಾಗಿದೆ. ಬರ ಎದುರಾಗಿದ್ದರೂ ಯಾವುದೇ ಶಾಸಕರು ಬರ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.
ಆದಷ್ಟು ಶೀಘ್ರ ರಾಜ್ಯ ಭಾರತೀಯ ಜನತಾ ಪಕ್ಷಕ್ಕೆ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಪಕ್ಷದ ವರಿಷ್ಠರನ್ನು ಕೋರಲಾಗಿದ್ದು, ಯಾರನ್ನಾದರೂ ಮಾಡಲಿ ಶೀಘ್ರ ಅಧ್ಯಕ್ಷರ ನೇಮಕ ಮಾಡುವಂತೆ ಮನವಿ ಮಾಡಲಾಗುವುದು. ವಿಪಕ್ಷ ನಾಯಕರನ್ನು ಸಹ ಡಿಸೆಂಬರ್ ಅಧಿವೇಶನ ಆರಂಭಗೊಳ್ಳುವುದರೊಳಗಾಗಿ ನೇಮಕ ಮಾಡಲು ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.