ಬೆಂಗಳೂರು: ಬಿಜೆಪಿ ಪಕ್ಷದ ವತಿಯಿಂದ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆಯಾದ ಮೇಲೆ ಪಕ್ಷದಲ್ಲಿ ಕಾಣಿಸಿಕೊಂಡಿರುವ ಬಂಡಾಯವನ್ನು ಮೊಳಕೆಯಲ್ಲೇ ಚಿವುಟುವ ಕೆಲಸವನ್ನು ಪಕ್ಷದ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡುತ್ತಿದ್ದಾರೆ.
ಬಂಡಾಯದ ಲಕ್ಷಣ ಕಾಣಿಸಿಕೊಂಡ 48 ಘಂಟೆಗಳಲ್ಲಿ ನಾಲ್ಕು ಲೋಕಸಭಾ ಕ್ಷೇತ್ರದ ಬಂಡಾಯ ಶಮನಗೊಳಿಸುವಲ್ಲಿ ಬಿ.ಎಸ್. ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.ತುಮಕೂರು, ದಾವಣಗೆರೆ, ಬೆಳಗಾವಿ, ಕೊಪ್ಪಳ ಲೋಕಸಭಾ ಕ್ಷೇತ್ರಗಳ ಬಂಡಾಯ ಶಮನಗೊಳಿಸಿದ ಬಿಎಸ್ವೈ. ಕಳೆದೊಂದು ವಾರದಿಂದ ಹೊತ್ತಿ ಉರಿಯುತ್ತಿದ್ದ ಬಂಡಾಯದ ಜ್ವಾಲೆ ನಂದಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಬಂಡಾಯವನ್ನು ಶಮನಗೊಳಿಸಿದ್ದೇ ರೋಚಕ ಕಥೆಯಾಗಿದೆ. ನಾಲ್ಕು ಕ್ಷೇತ್ರಗಳಲ್ಲಿ ಬಂಡಾಯ ತಣ್ಣಿಗಾಗಿಸಿದ ಯಡಿಯೂರಪ್ಪ ರವರ ಕಥೆ ಹೀಗಿದೆ.ಮೊದಲು ತುಮಕೂರು ಅಖಾಡಕ್ಕೆ ಎಂಟ್ರಿ ಕೊಟ್ಟ ಯಡಿಯೂರಪ್ಪ ವಿ.ಸೋಮಣ್ಣರಿಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ಬಂಡಾಯದ ಕಿಡಿ ಹೊತ್ತಿಸಿದ್ದ ಜೆ.ಸಿ.ಮಾಧುಸ್ವಾಮಿಯವರಿಗೆ ಕರೆ ಮಾಡಿ, ನಡೆದ ವಿಚಾರ ತಿಳಿಸಿ ಸಮಾಧಾನಗೊಳಿಸಿದ್ದಾರೆ. ಪಕ್ಷ ಬಿಡುವ ಹಂತ ತಲುಪಿದ್ದ ಮಾಧುಸ್ವಾಮಿ ತಣ್ಣಗಾಗಿದ್ದಾರೆ. ಮುಂದಿನ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಎರಡನೆಯದಾಗಿ ದಾವಣಗೆರೆಗೆ ತಾವೇ ತೆರಳಿ ನಾಯಕರ ಜೊತೆಗೆ ಸಮಾಲೋಚನೆ ನಡೆಸಿದ ಯಡಿಯೂರಪ್ಪ, ಸಭೆಯಲ್ಲಿ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೆಗಲಿಗೆ ವಹಿಸಿ ನಿರಾಳರಾಗಿದ್ದಾರೆ.ಬೆಳಗಾವಿಯಲ್ಲಿ ಆರಂಭವಾಗಿದ್ದ ಬಂಡಾಯ, ಯಡಿಯೂರಪ್ಪರ ಎಂಟ್ರಿಯಿಂದಲೇ ಹೆಚ್ಚು ಹೊತ್ತು ಉರಿಯದೇ ತಣ್ಣಗಾಗಿದೆ.
ಕೊಪ್ಪಳ ಕ್ಷೇತ್ರದ ಹಾಲಿ ಸಂಸದ ಕರಡಿ ಸಂಗಣ್ಣರನ್ನು ಪಕ್ಷದ ಕಚೇರಿಗೆ ಕರೆಸಿ, ಗಾಲಿ ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಆಗಿದ್ದಾರೆ ಎಂದುಸಮಾಧಾನಪಡಿಸಿದ್ದಾರೆ. ಬೀದರ್ನಲ್ಲಿ ಎದ್ದಿದ್ದ ಬಂಡಾಯಕ್ಕೆ ಆರ್. ಅಶೋಕ್ರಿಂದ ಮದ್ದೇರಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಸದ್ಯ ಇನ್ನೊಂದಷ್ಟು ಕ್ಷೇತ್ರಗಳಿಂದ ಬಂಡಾಯದ ಜ್ವಾಲೆ ಕೊತ ಕೊತನೆ ಕುದಿಯುತ್ತಿದ್ದು, ಚಿಕ್ಕಬಳ್ಳಾಪುರ, ತವರು ಕ್ಷೇತ್ರ ಶಿವಮೊಗ್ಗದಲ್ಲಿ ಈವರೆಗೂ ಬಂಡಾಯ ತಣ್ಣಗಾಗದೇ ಜೋರಾಗಿ ಜ್ವಾಲೆ ಉರಿಯುತ್ತಲೇ ಇದೆ. ಈಗಾಗಲೇ 48 ಘಂಟೆಗಳ ಕಾಲದಲ್ಲಿಯೇ ಅದೇನು ಮಾಡುತ್ತಾರೆ? ಎಂದು ಮಾತನ್ನಾಡುತ್ತಿದ್ದವರಿಗೆ ಬಂಡಾಯ ಆರಿಸಿರುವ ಯಡಿಯೂರಪ್ಪ, ಮುಂದೆ ಏನು ಮಾಡುತ್ತಾರೆ ಸದ್ಯದ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಡಿಮ್ಯಾಂಡಪ್ಪೋ… ಡಿಮ್ಯಾಂಡ್..
ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವಾಗ ಬಿ.ಎಸ್. ಯಡಿಯೂರಪ್ಪ ಜೊತೆಗಿರಬೇಕೆಂದು ಅಭ್ಯರ್ಥಿಗಳ ಒತ್ತಾಯ ಕೇಳಿ ಬರುತ್ತಿದೆ.
ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಮೈಸೂರು-ಕೊಡಗು, ತುಮಕೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಚಾಮರಾಜನಗರ ಹೀಗೆ ಹಲವು ಕ್ಷೇತ್ರಗಳ ಅಭ್ಯರ್ಥಿಗಳಿಂದ ಒಂದೇ ದಿನ ನಾಮಪತ್ರ ಸಲ್ಲಿಕೆಯಾಗುತ್ತಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಏಪ್ರಿಲ್ 3 ರಂದು ದಿನ ಚೆನ್ನಾಗಿ ಇರುವ ಕಾರಣ. ಅಂದೇ ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಗಳು ಮುಂದಾಗಿದ್ದಾರೆ. ನಾಮಪತ್ರ ಸಲ್ಲಿಕೆಗೆ ಬಿ.ಎಸ್. ಯಡಿಯೂರಪ್ಪ ಹಾಜರಿರಬೇಕೆಂದು ಅಭ್ಯರ್ಥಿಗಳ ಇರಾದೆಯಾಗಿದೆ.ಒಂದೇ ದಿನವೇ ಎಲ್ಲರೂ ನಾಮಪತ್ರ ಸಲ್ಲಿಕೆ ಅಂದರೆ ಹೇಗೆ? ಎಲ್ಲಿಗೆ ಬರುವುದು? ಎಲ್ಲಿಗೆ ಬಿಡುವುದು? ಎಂದು ಯಡಿಯೂರಪ್ಪ ಜಿಜ್ಞಾಸೆಗೊಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ 3 ರಂದು ಶೋಭನನಾಮ ಸಂವತ್ಸರದ ಉತ್ತರಾಯಣದ ಪಾಲ್ಗುಣ ಮಾಸದ ಕೃಷ್ಣ ಪಕ್ಷದ ನವಮಿ ತಿಥಿ. ಉತ್ತರ ಆಷಾಢ ನಕ್ಷತ್ರ, ರಾಹುಕಾಲ 12 ಘಂಟೆಯಿಂದ 1:30 ರವರೆಗೆ. ರಾಹುಕಾಲದ ಸಮಯ ಬಿಟ್ಟು, ಅಂದು ನಾಮಪತ್ರ ಸಲ್ಲಿಕೆ ಮಾಡಿದ್ರೆ, ಎದುರಾಳಿಗಳ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ.ಹೀಗಾಗಿ, ಅಂದೇ ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಗಳು ಮುಹೂರ್ತ ನೋಡುತ್ತಿದ್ದಾರೆ. ಎಲ್ಲರೂ ಒಂದೇ ದಿನ ಅಂದರೆ ಕಷ್ಟ. ಬೇರೆ ಬೇರೆ ದಿನಗಳಲ್ಲಿ ನೋಡಿ ಮುಹೂರ್ತ ನಿಗದಿಪಡಿಸಿಕೊಳ್ಳಿ ಎಂದು ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ.