ಮಧುಗಿರಿ: ರಾಜ್ಯವು ಬರಗಾಲದಿಂದ ತತ್ತರಿಸುತ್ತಿದ್ದು , ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೀಡಿ, ಬರದ ದವಡೆಯಿಂದ ರೈತಾಪಿ ಜನರನ್ನು ಉಳಿಸಲು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುವುದೆಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ರಾಜ್ಯ ಸರ್ಕಾರವು ಜೀವಂತವಾಗಿದೆಯೋ ಹೇಗೆ ಎಂಬ ಅನುಮಾನ ಮೂಡುತ್ತಿದೆ, ಕೊರಟಗೆರೆ ಮತ್ತು ಮಧುಗಿರಿಯಲ್ಲಿ ಶೇಕಡ 95 ರಷ್ಟು ಬೆಳೆ ಹಾನಿಯಾಗಿದೆ,ರಾಜ್ಯ ಸರ್ಕಾರವು ಬರದ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ತ್ವರಿತವಾಗಿ ಪರಿಹಾರ ಕೊಡಿಸಲು ನಾನು ಬದ್ಧವಾಗಿದ್ದು, ರೈತರು ಯಾವುದೇ ಕಾರಣಕ್ಕೂ ದೃತಿ ಇಡಬಾರದುಎಂದು ಮನವಿ ಮಾಡಿದರು.ಈ ತಾಲೂಕಿನ ವಿವಿಧಡೆ ರೈತರ ಜಮೀನಿನ ಬೆಳೆಗಳನ್ನು ವೀಕ್ಷಿಸಲಾಗಿ, ಫಸಲು ಸಂಪೂರ್ಣ ವಿಫಲವಾಗಿದ್ದು ,ಜಾನುವಾರುಗಳ ಮೇವಿಗೂ ತೊಂದರೆಯಾಗಿದೆ, ರೈತರು ಗುಳೆ ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದರು.
ಈ ರೀತಿಯ ಕಷ್ಟ ಪರಿಸ್ಥಿತಿಯಲ್ಲೂ ರಾಜ್ಯ ಸರ್ಕಾರವು ಯಾವುದೇ ಶೀಘ್ರ ಪರಿಹಾರ ಕೈಗೊಳ್ಳದೆ ಕೈ ಚೆಲ್ಲಿ ಕುಳಿತಿದ್ದು ,ಖಜಾನೆ ಖಾಲಿಯಾಗಿರುವುದಕ್ಕೆ ಇದು ನಿದರ್ಶನವಾಗಿದೆ ಎಂದರು.ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ವಿನಯ್ ಬಿದರೆ, ಬಿಜೆಪಿ ಜಿಲ್ಲಾಧ್ಯಕ್ಷ ಬಿಕೆ ಮಂಜುನಾಥ್, ಮುಖಂಡರಾದ ಎಲ್ ಸಿ ನಾಗರಾಜ್,ಪಿ.ಎಲ್ ನರಸಿಂಹಮೂರ್ತಿ,ನಾಗೇಂದ್ರ ಇತರ ಉಪಸ್ಥಿತರಿದ್ದರು.