ಬೇಲೂರು: ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆ ಮುಂಭಾಗ ಧಮ್ಮ ದೀಪ ಹಾಗೂ ಬುದ್ಧ ಧಮ್ಮ ಗೀತೆ ನಮನ ಕಾರ್ಯಕ್ರಮದ ಮೂಲಕ ಬುದ್ಧರ ಬಾವಚಿತ್ರ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ, ಮೇಣದ ಬತ್ತಿಗಳನ್ನು ಹಚ್ಚಿ 2568ನೇ ವೈಶಾಖ ಬುದ್ಧ ಪೂರ್ಣಿಮೆಯನ್ನು ಬೌದ್ಧ ಉಪಾಸಕರು, ಬುದ್ದ, ಬಸವ ಅಂಬೇಡ್ಕರ್ ಅನುಯಾಯಿಗಳು ಆಚರಿಸಿದರು.
ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಪ್ರಗತಿಪರ ಚಿಂತಕ ಗೋವಿನಹಳ್ಳಿ ರವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜಾತಿ, ಧರ್ಮದ ನಡುವಿನ ಗಲಭೆಗಳಿಂದಾಗಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ. ಇದನ್ನು ಸರಿಪಡಿಸ ಬೇಕೆಂದರೆ ಪ್ರತಿಯೊಬ್ಬರು ಬುದ್ಧ, ಬಸವ, ಅಂಬೇಡ್ಕರ್ರವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಮಾತ್ರ ಸಾಮರಸ್ಯವನ್ನು ಕಾಪಾಡಲು ಸಾಧ್ಯ.
ಭಗವಾನ್ ಬುದ್ಧರು ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಸಾರಿ ಬೌದ್ಧ ಧರ್ಮದ ಸ್ಥಾಪಿಸಿ ಎಲ್ಲರೂ ಸಮಾನರು ಎಂಬುದನ್ನು ಜಗತ್ತಿಗೆ ಸಾರಿದರು. ನಮ್ಮ ಯೋಚನೆಯ ಫಲ. ಯೋಜನೆಗಳೇ ನಮಗೆ ತಳಹದಿಯಾಗಲಿದೆ ಎಂಬ ಬುದ್ಧರ ನುಡಿ ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೆ ಪಠವಾಗಿದೆ. ನಾವು ಯಾವಾಗಲೂ ಏನನ್ನು ಆಲೋಚಿಸುತ್ತೇವೆಯೋ ಮುಂದೆ ಅದೇ ಸಂಭವಿಸುತ್ತದೆ ಎಂಬ ಬುದ್ಧರ ನುಡಿಗಳು ಎಲ್ಲರ ಬದುಕಿಗೆ ದಾರಿ ದೀಪವಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಜಿಲ್ಲಾ ಪ್ರಧಾನ ಸಂಚಾಲಕ ಬಿ.ಎಲ್.ಲಕ್ಷ್ಮಣ್ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ರವರು ಸರ್ವ ಜನಾಂಗದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಪಾಲಿಸಿದಾಗ ಮಾತ್ರ ಅಭಿವೃದ್ಧಿ ಸಾದ್ಯ. ಭಗವಾನ್ ಬುದ್ಧರು ಆಸೆಯೇ ದುಖಃಕ್ಕೆ ಮೂಲ ಎಂದು ಸಾರಿದರೇ, ಬಸವಣ್ಣನವರು ಕಾಯಕವೇ ಕೈಲಾಸ, ಡಾ.ಅಂಬೇಡ್ಕರ್ರವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಸಂದೇಶದೊಂದಿಗೆ ಸಮಾಜದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಾರಿದವರು. ಇಂತಹ ಮಹಾನ್ ಪುರುಷರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿ ಕೊಂಡು ಮುನ್ನಡೆಯಬೇಕು ಎಂದರು.
ಸಾಮಾಜಿಕ ಹೋರಾಟಗಾರ ಶಶಿಧರ್ ಮೌರ್ಯ ಮಾತನಾಡಿ, ವಿದ್ಯಾವಂತರು ಹೆಚ್ಚಿದಂತೆ ಮೌಢ್ಯ ಎಂಬ ದಾಸ್ಯದತ್ತ ಸಾಗುತ್ತಿರುವುದು ವಿಷಾಧದ ಸಂಗತೀಯಾಗಿದೆ. ನಾಡಿನ ದಾರ್ಶನಿಕರು ನಾಡಿಗೆ ನೀಡಿದ ಸಂದೇಶಗಳನ್ನು ಪಾಲಿಸುವ ಮೂಲಕ ನಮ್ಮಲ್ಲಿರುವ ಕೀಳರಿಮೆ ತೊಡೆದು ಉತ್ತಮ ಸಾದನೆಯತ್ತ ಸಾಗಿದಾಗ ಮಾತ್ರ ಮಹಾನ್ ಪುರುಷರ ಜಯಂತಿಗೆ ಅರ್ಥ ಬರುತ್ತದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ಶಿಕ್ಷಕ ಸಂಪತ್ತು, ಸಾಮಾಜಿಕ ಹೋರಾಟಗಾರ ನೂರ್ ಅಹಮದ್, ಕಲಾವಿದ ಚಂದನ ಕುಮಾರ್, ಪೋಲಿಸ್ ಕುಮಾರ್, ಗಿರೀಶ್, ಸುಪ್ರೀತ್, ಸುನೀಲ್ ಸೇರಿದಂತೆ ಇತರರಿದ್ದರು.ಇದೇ ಸಂದರ್ಭ ಬೇಲೂರಿನ ಕಲಾವಿದ ಚಂದನ್ ಕುಮಾರ್ ಬುದ್ಧ ಧಮ್ಮ ಗೀತೆ ನಮನ ಕಾರ್ಯಕ್ರಮ ನಡೆಸಿಕೊಟ್ಟರು.