ಬಾಗೇಪಲ್ಲಿ: ಯೋಗದಿಂದ ಸದೃಢ ದೇಹ ಮತ್ತು ಸದೃಢ ಮನಸ್ಸು ನಿರ್ಮಾಣವಾಗುತ್ತದೆ ಎಂದು ಬ್ರೈಟ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಆರ್. ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಕೊತ್ತಪಲ್ಲಿ ರಸ್ತೆಯಲ್ಲಿರುವ ಬ್ರೈಟ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರೂ ಯೋಗವನ್ನು ಜೀವನದಲ್ಲಿ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು.
ಭಾರತ ಪರಿಚಯಿಸಿದ ಯೋಗವು ಇಂದು ವಿಶ್ವದಲ್ಲೆಡೆ ಹರಡಿರುವುದು ಭಾರತದ ನಮ್ಮ ಸಂಸ್ಕೃತಿಯ ಹೆಮ್ಮೆಯಾಗಿದೆ. ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಅಗತ್ಯವಾಗಿದೆ. ಯಾವುದೇ ವಯಸ್ಸಿನ ಮಿತಿಯಿಲ್ಲದೆ ಯೋಗವನ್ನು ಅಭ್ಯಾಸ ಮಾಡಿಕೊಳ್ಳಬೇಕು.
ದೇಹ ಮತ್ತು ಮನಸ್ಸು ಎರಡನ್ನೂ ಸ್ವಸ್ಥವಾಗಿಡಲು ಯೋಗದಿಂದ ಸಾಧ್ಯವಿದೆ. ಯೋಗವೆಂದರೆ ಔಷಧ ರಹಿತ ಚಿಕಿತ್ಸಾ ಪದ್ಧತಿಯ ದೇಸಿ ಕ್ರಮ. ಮಿತ ಆಹಾರ ಸೇವನೆ, ಉಪವಾಸ ವ್ಯಾಯಾಮದಂತಹ ಚಿಕಿತ್ಸಾ ಕ್ರಮಗಳ ಮೂಲಕ ಮನುಷ್ಯನ ದೇಹವನ್ನು ನಿಯಂತ್ರಣ ತರಬಹುದಾಗಿದೆ.
ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಬಹುದು. ಜೊತೆಗೆ ಸರಳ ಯೋಗಗಳು ನಮ್ಮ ಮನಸ್ಸನ್ನು ಉಲ್ಲಸವಾಗಿಡುತ್ತದೆ. ಜಗತ್ತಿಗೆ ಯೋಗವನ್ನು ಅನಾದಿ ಕಾಲದಿಂದಲೂ ಪರಿಚಯ ಮಾಡಿ ಕೊಟ್ಟಿರುವುದು ನಮ್ಮ ಭಾರತ ದೇಶದ ಋಷಿ ಮುನಿಗಳು. ಯೋಗದಿಂದ ಸದೃಢ ದೇಹ ಮತ್ತು ಸದೃಢ ಮನಸ್ಸು ನಿರ್ಮಾಣವಾಗುತ್ತದೆ.
ಒಳ್ಳೆಯ ಜೀವನಶೈಲಿ, ಸಾತ್ವಿಕ ಆಹಾರ ಸೇವನೆ ಹಾಗೂ ಉತ್ತಮ ಚಿಂತನೆ ಮಾಡುತ್ತಾ ಕಾಯಕ ಯೋಗದ ಮೂಲಕ ಸಾರ್ಥಕವಾಗಿ ಬದುಕಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಬ್ರೈಟ್ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷರಾದ ಜಿ.ಎಸ್. ಸಿದ್ದಲಿಂಗಯ್ಯ ಸೇರಿದಂತೆ ಶಿಕ್ಷಕರು, ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.