ಬೆಂಗಳೂರು: ದೂರು ದಾಖಲಿಸಿದ್ದಕ್ಕೆ ಬಿಲ್ಡರ್ನನ್ನು ಅಪಹರಿಸಿರುವ ಸಂಬಂಧ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಕಳೆದ ಜ. 12 ರಂದು ಜ್ಞಾನಭಾರತಿ ಸಮುದಾಯ ಭವನ ಬಳಿಯಿಂದ ಬಿಲ್ಡರ್ ಅಶೋಕ್ ಶಿವರಾಜ್ ರನ್ನು ಅಪಹರಣ ಮಾಡಲಾಗಿದ್ದು ಈ ಆರೋಪ ಸಂಬಂಧ ವೀರೇಶ್, ರಶ್ಮಿ, ಕೃಷ್ಣಪ್ಪ, ರಾಜಶೇಖರ್, ರಘು ಸೇರಿ 8 ಜನರ ವಿರುದ್ಧ ದೂರು ದಾಖಲಾಗಿದೆ.
ಇನ್ನು ಈ ಆರೋಪಿಗಳು ಅಶೋಕ್ ಅವರನ್ನು ಒಂದು ವರ್ಷ ಬಂಧನದಲ್ಲಿಟ್ಟು ಹಿಂಸೆ ನೀಡಿದ್ದರು ಎಂದು ಅಶೋಕ್ ಆರೋಪಿಸಿದ್ದಾರೆ.
ಅಶೋಕ್ ಶಿವರಾಜ್ ಅವರು ಹಲವು ವರ್ಷಗಳಿಂದ ಬಿಲ್ಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ವ್ಯವಹಾರದಲ್ಲಿ ನಷ್ಟ ಎದುರಾಗಿತ್ತು. ಈ ವೇಳೆ ವೀರೇಶ್ ಮತ್ತು ರಶ್ಮಿ ಎಂಬುವವರು ಪರಿಚಯವಾಗಿ ಅಶೋಕ್ ಅವರೊಂದಿಗೆ ಪಾಟ್ರ್ನರ್ ಆಗಿದ್ದರು.
ಬಳಿಕ ಅಶೋಕ್ ಅವರ ಬಳಿ ಇದ್ದ ಆಸ್ತಿಗೆ ಆಸೆಪಟ್ಟು ಕಳೆದ 1 ವರ್ಷದಿಂದ ಅಶೋಕ್ ಅವರನ್ನು ಬಂಧನದಲ್ಲಿರಿಸಿ ಆಸ್ತಿ ಕಬಳಿಸಿದ ಆರೋಪ ಕೇಳಿ ಬಂದಿದೆ. ಫ್ಲ್ಯಾಟ್ ಸೇರಿದಂತೆ ಅಕ್ರಮವಾಗಿ ಜಮೀನು ನೋಂದಣಿ ಮಾಡಿಸಿಕೊಂಡ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿಗಳ ಬಂಧನದಿಂದ ತಪ್ಪಿಸಿಕೊಂಡು ಬಂದ ಅಶೋಕ್ ಅವರು ದೂರು ನೀಡಿದ್ದಾರೆ.
ದೂರು ನೀಡಿದ್ದಕ್ಕೆ ಮತ್ತೆ ಅಶೋಕ್ ಶಿವರಾಜ್ ಅವರನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಸಂಬಂಧಿಯೊಬ್ಬರು ನಿರಂತರ ಕರೆ ಮಾಡಿದಾಗ ವಿಚಾರ ಬಯಲಿಗೆ ಬಂದಿದೆ.ವಿಚಾರ ತಿಳಿಯುತ್ತಿದ್ದಂತೆ ಸಂಬಂಧಿ ಉಷಾ 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಪೊಲೀಸರು ಕರೆ ಮಾಡಿದ ಬಳಿಕ ಅಶೋಕ್ರನ್ನು ವಾಪಸ್ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಇನ್ನು ಅಶೋಕ್ ಶಿವರಾಜ್ ವಿರುದ್ಧವೂ ಹಲವು ವಂಚನೆ ಪ್ರಕರಣಗಳಿವೆ. ಬೇರೆ ಬೇರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿರುವುದು ಪತ್ತೆಯಾಗಿದೆ.