ಬೆಂಗಳೂರು: ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಗ್ಯಾರೆಂಟಿ ಆಗುತ್ತಿದ್ದಂತೆ, ಶಾಶ್ವತವಾಗಿ CM-in-waiting DV ಆಗಿ ಉಳಿಯಬೇಕಾಗುತ್ತಲ್ಲಾ ಎನ್ನುವ ಹತಾಶೆಯಿಂದ ಕಂಗಾಲಾಗಿರುವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ. ಸುರೇಶ್ ಆ ಮತದಾರರ ಮೇಲಿನ ಕೋಪಕ್ಕೆ ಗೂಂಡಾಗಿರಿಗೆ ಇಳಿದಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ತಿಳಿಸಿದ ಅವರು, ಬಿಜೆಪಿ ಕಾರ್ಯಕರ್ತ ಸಹೋದರ ನವೀನ್ ಮೇಲೆ ಕಾಂಗ್ರೆಸ್ಸಿನ ಗೂಂಡಾಗಳು ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೆ ಕಾಟಾಚಾರಕ್ಕೆ ಕೇಸ್ ಹಾಕುವ ಮೂಲಕ ಯಾರನ್ನು ರಕ್ಷಣೆ ಮಾಡುತ್ತಿದ್ದೀರಿ ಸಿಎಂ ಸಿದ್ದರಾಮಯ್ಯನವರೇ? ಸ್ಟ್ರಾಂಗ್ ಸಿಎಂ ಎಂದು ಹೇಳಿಕೊಳ್ಳುವ ನೀವು ಡಿಕೆ ಸಹೋದರದ ಮುಂದೆ ಅಷ್ಟೊಂದು ವೀಕ್ ಯಾಕಾಗಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರು ನಿರ್ಭೀತಿಯಿಂದ ಮತದಾನ ಮಾಡುವ ವಾತಾವರಣ ಕೆಡಸಿ ಮತದಾರರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಈ ದುಷ್ಕೃತ್ಯಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು. ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮಕೈಗೊಂಡು ನಿಷ್ಪಕ್ಷಪಾತವಾಗಿ ಅವಕಾಶ ಕಲ್ಪಿಸಿ, ಮತದಾರರಲ್ಲಿ ಧೈರ್ಯ, ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.