ಚಾಮರಾಜನಗರ: ದೃಷ್ಟಿ ದೋಷ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆಶಾಕಿರಣ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಶಾಸಕರು ಹಾಗೂ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನಗರದ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಧತ್ವ ಮುಕ್ತ ಸಮಾಜ ನಿಮಾರ್ಣಕ್ಕಾಗಿ ಮನೆ ಬಾಗಿಲಿಗೆ ಆಶಾಕಿರಣ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೆ ಕನ್ನಡಕ ವಿತರಿಸಿ ಅವರು ಮಾತನಾಡಿದರು.ಆಶಾಕಿರಣವು ರಾಜ್ಯ ಸರ್ಕಾರದ ಒಂದು ಮಹತ್ವಕಾಂಕ್ಷೆ ಯೋಜನೆಯಾಗಿದೆ.
ದೃಷ್ಟಿದೋಷ ಮುಕ್ತ ರಾಜ್ಯವನ್ನಾಗಿಸುವ ಉದ್ದೇಶವನ್ನು ಆಶಾಕಿರಣ ಯೋಜನೆ ಹೊಂದಿದೆ. ಆಶಾಕಿರಣ ಯೋಜನೆಯಡಿ ಮನೆಬಾಗಿಲಿಗೆ ಬಂದು ಕುಟುಂಬದ ಪ್ರತಿ ಸದಸ್ಯರ ಕಣ್ಣುಗಳನ್ನ ತಪಾಸಣೆ ಮಾಡಿ ದೃಷ್ಟಿ ದೋಷವುಳ್ಳವರಿಗೆ ಕನ್ನಡಕ ನೀಡಲಾಗುತ್ತಿದೆ ಎಂದರು.
ಮನುಷ್ಯನಿಗೆ ಕಣ್ಣು ತುಂಬಾ ಮುಖ್ಯ ವಾಗಿದ್ದು ವಯೋಸಹಜ, ಅನುವಂಶಿಯತೆ, ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಯಿಂದ ದೃಷ್ಠಿದೋಷ, ಅಂದತ್ವ ಉಂಟಾಗುತ್ತದೆ.
ಇದರ ನಿವಾರಣೆಗೆ ಆಶಾಕಿರಣ ಕಾರ್ಯಕ್ರಮವನ್ನು ಅನುಷ್ಠಾನಗೊಳ್ಳಿಸಲಾಗಿದೆ. ರಾಜ್ಯದ ನಾಲ್ಕು ಜಿಲ್ಲೆಗಳಾದ ಹಾವೇರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕಲ್ಬುರ್ಗಿ ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯು 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಅದರಲ್ಲಿ ಆಶಾಕಿರಣ ಯೋಜನೆಯಾಡಿ 8,60,000 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ದೃಷ್ಟಿದೋಷ ಉಂಟಾಗಿರುವ ವ್ಯಕ್ತಿಗಳಿಗೆ ಅಗತ್ಯವಾಗಿರುವ ಕನ್ನಡಕ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಅವರು ಮಾತನಾಡಿ ಇತರೆ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಮಕ್ಕಳು ಉತ್ತಮವಾದ ದೃಷ್ಟಿಹೊಂದಿದ್ದಾರೆ. ಇದು ಬಹಳ ಸಮಾಧಾನದ ಸಂಗತಿಯಾಗಿದೆ. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ 31 ಸಾವಿರಕ್ಕೂ ಹೆಚ್ಚು ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಇದರಲ್ಲಿ ಮೂರುವರೆ ಸಾವಿರ ಮಕ್ಕಳಿದ್ದಾರೆ ಎಂದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಚಂದ್ರಶೇಖರ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮಾರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದರು.