ರಾಜಸ್ತಾನ: ಟ್ರಕ್ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೂಡಲೇ ಬೆಂಕಿ ಕಾಣಿಸಿಕೊಂಡು ಕಾರಿನಲ್ಲಿದ್ದ 7 ಮಂದಿ ಸಜೀವ ದಹನವಾಗಿರುವ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಸೇರಿದಂತೆ ಒಂದೇ
ಕುಟುಂಬದ ಏಳು ಜನರು ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ಪ್ರಯಾಣಿಕರು, ಉತ್ತರ ಪ್ರದೇಶದ ಮೀರತ್ ನಿವಾಸಿಗಳಾಗಿದ್ದು, ರಾಜಸ್ಥಾನದ ಸಲಾಸರ್ನಲ್ಲಿರುವ ಸಲಾಸರ್ ಬಾಲಾಜಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದರು. ಚುರು ಕಡೆಗೆ ಹೋಗುತ್ತಿದ್ದ ಕಾರು ಚಾಲಕ ಟ್ರಕ್ ಅನ್ನು ಹಿಂದಿಕ್ಕಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ.ಎದುರಿನಿಂದ ಇನ್ನೊಂದು ವಾಹನ ಬಂದಾಗ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ನಿಯಂತ್ರಣ ತಪ್ಪಿ ಟ್ರಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಎಲ್ಪಿಜಿ ಕಿಟ್ಗೆ ಬೆಂಕಿ ಹೊತ್ತಿಕೊಂಡಿದ್ದು, ಟ್ರಕ್ನಲ್ಲಿ ತುಂಬಿದ್ದ ಹತ್ತಿ ಬೆಂಕಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಅಲ್ಲಿದ್ದವರು ಹರಸಾಹಸ ಮಾಡಿದರೂ ಬೆಂಕಿಯ ರಭಸಕ್ಕೆ ಕಾರು ಪ್ರಯಾಣಿಕರು ಬೀಗ ಹಾಕಿದ್ದ ಬಾಗಿಲು ತೆರೆಯಲು ಸಾಧ್ಯವಾಗದೆ ಸಜೀವ ದಹನವಾಗಿದ್ದಾರೆ.ಅಪಘಾತದ ಪ್ರತ್ಯಕ್ಷದರ್ಶಿ ರಾಮ್ನಿವಾಸ್ ಸೈನಿ, ಪ್ರಯಾಣಿಕರು ಸಹಾಯಕ್ಕಾಗಿ ಕಿರುಚುತ್ತಿದ್ದರು ಆದರೆ ಬೆಂಕಿಯಿಂದಾಗಿ ಅವರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜಿಸಲಾಗಿತ್ತು, ಆದರೆ ಬೆಂಕಿಯನ್ನು ನಿಯಂತ್ರಣಕ್ಕೆ ತರುವಷ್ಟರಲ್ಲಿ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ.
ಮೃತರನ್ನು ನೀಲಂ ಗೋಯಲ್ (55), ಅವರ ಮಗ ಅಶುತೋಷ್ ಗೋಯಲ್ (35), ಮಂಜು ಬಿಂದಾಲ್ (58), ಅವರ ಮಗ ಹಾರ್ದಿಕ್ ಬಿಂದಾಲ್ (37), ಅವರ ಪತ್ನಿ ಸ್ವಾತಿ ಬಿಂದಾಲ್ (32) ಮತ್ತು ಅವರ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಎಂದು ಗುರುತಿಸಲಾಗಿದೆ.