ಬೆಂಗಳೂರು: ಹೆಚ್ಚಿನ ಲಾಭಾಂಶ ಆಸೆ ಹುಟ್ಟಿಸಿ ನಂಬಿಕೆ ಗಳಿಸಿ ಸಾರ್ವಜನಿಕರಿಂದ ಲಕ್ಷಾಂತರ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಗ್ಯಾಂಗ್ ಅನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಪ್ರತಾಪ್ ರೆಡ್ಡಿ, ಒಬಳೇಶ್, ಮಣಿ ಮತ್ತು ಗೋಪಿ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಕೆ.ಆರ್.ಪುರದಲ್ಲಿ ಎಸ್ಫೈಎಸ್ ಎಂಬ ಕಂಪನಿಯನ್ನು ಶುರುಮಾಡಿದ್ದರು. ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೇ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ನಂಬಿಸಿ ಆಂಧ್ರ ಪ್ರದೇಶಮತ್ತು ಕರ್ನಾಟಕದ ಹಲವರನ್ನು ವಂಚಿಸಿದ್ದರು.
ಒಂದು ಲಕ್ಷ ಹೂಡಿಕೆ ಮಾಡಿದರೇ ತಿಂಗಳಿಗೆ 19 ಪರ್ಸೆಂಟ್ ಲಾಭ ಕೊಡುವುದಾಗಿ ನಂಬಿಸಿದ್ದರು. ಅದರಂತೆ ಪ್ರಾರಂಭದಲ್ಲಿ ಹಣ ವಾಪಸ್ಸು ಕೊಟ್ಟಿದ್ದಾರೆ. ನಂತರ ಹಣವನ್ನು ಕೊಡದೆ, ನಿಮ್ಮ ಹಣವನ್ನು ಹರಿಯಾಣದಲ್ಲಿ ಹೂಡಿಕೆ ಮಾಡಿದ್ದೇವೆ, ಅಲ್ಲಿ ಲಾಭ ಬಂದಮೇಲೆ ಕೊಡುವುದಾಗಿ ಹೂಡಿಕೆದಾರರಿಗೆ ಹೇಳಿದ್ದರು. ಆದರೆ ಸುಮಾರು ದಿನಗಳು ಕಾಯ್ದರು ಹಣ ನೀಡಲಿಲ್ಲ.
ಇದರಿಂದ ರೋಸಿಹೋದ ಆಂಧ್ರ ಪ್ರದೇಶ ಮೂಲದ ಹೂಡಿಕೆದಾರ ಸಂದಡಿ ನರಸಿಮ್ಮ ರೆಡ್ಡಿ ಎಂಬುವವರು ಕಾಟನ್ ಪೇಟೆಗೆ ಪೆÇಲೀಸ್ ಠಾಣೆಗೆ ದೂರು ನೀಡಿದರು. ದೂರು ದಾಖಲಿಸಿಕೊಂಡು ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದಾಗ ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಒಟ್ಟು ನಾಲ್ಕು ಬ್ಯಾಂಕ್ ಅಕೌಂಟ್ಗಳ ಮೂಲಕ 30 ಕೋಟಿ ರೂ. ವ್ಯವಹಾರವಾಗಿರುವುದು ಪತ್ತೆಯಾಗಿದೆ. ಸದ್ಯ ಯಾವ ಯಾವ ಅಕೌಂಟ್ಗೆ ಹಣ ಹೋಗಿದೆ ಎಂದು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.