ಬೆಂಗಳೂರು: ಕೇರಳ ಮೂಲದ ಚಾನಲ್ ನಲ್ಲಿ ಹೂಡಿಕೆ ಮಾಡಿರುವ ಸಂಬಂಧ ಮಾಹಿತಿ ನೀಡುವಂತೆ ಕೋರಿ ಸಿಬಿಐ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದೆ.
ಡಿಕೆಶಿವಕುಮಾರ್ ಹಾಗೂ ಅವರ ಪತ್ನಿ ಉಷಾಶಿವಕುಮಾರ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿಗೆ ಹೂಡಿಕೆಗೆ ಹಾಕಲಾದ ಹಣದ ಮೂಲದ ಬಗ್ಗೆ ಮಾಹಿತಿ ನೀಡುವಂತೆ ಸಿಸಿಬಿ ನೋಟಿಸ್ ನೀಡಲಾಗಿದೆ.
ಸಿಆರ್ಪಿಸಿ ಸೆಕ್ಷನ್ 91 ರ ಅಡಿಯಲ್ಲಿ ಹೊರಡಿಸಲಾದ ತನ್ನ ನೋಟಿಸ್ನಲ್ಲಿ, ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ಮಾಡಿದ ಹೂಡಿಕೆಗಳು, ಅವರಿಗೆ ಪಾವತಿಸಿದ ಲಾಭಾಂಶಗಳು, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ಜೊತೆಗೆ ಅವುಗಳನ್ನು ಮಾಡಿದ ಬ್ಯಾಂಕ್ ವಿವರಗಳನ್ನು ಒದಗಿಸುವಂತೆ ಸಿಬಿಐ ಜೈ ಹಿಂದ್ ಚಾನಲ್ಗೆ ಹೇಳಿದೆ. ಹಿಡುವಳಿಗಳ ಹೇಳಿಕೆ, ಅವರ ಲೆಡ್ಜರ್ ಖಾತೆಗಳು, ಒಪ್ಪಂದದ ಟಿಪ್ಪಣಿಗಳು ಮತ್ತು ಇತರ ವಿವರಗಳ ಜೊತೆಗೆ ಎಲ್ಲಾ ಷೇರು ವಹಿವಾಟುಗಳ ವಿವರ ನೀಡುವಂತೆ ಸಿಬಿಐ ಸೂಚಿಸಿದೆ.
ಜೈಹಿಂದ್ ಚಾನಲ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಶಿಜು ಅವರು ಸಿಬಿಐ ನೋಟಿಸ್ ಸ್ವೀಕರಿಸಿದ್ದು, ಸಂಸ್ಥೆ ಕೋರಿರುವ ಎಲ್ಲಾ ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಮತ್ತು ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಕೇರಳದ ಕಾಂಗ್ರೆಸ್ ನಾಯಕರೂ ಆಗಿರುವ ಶಿಜು, ಯಾವುದೇ ಗುರುತಿಸಲಾದ ಅಕ್ರಮ ಇಲ್ಲದ ಕಾರಣ ಹಿಂದಿನ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವು ಪ್ರಕರಣವನ್ನು ತನಿಖೆ ಮಾಡಿ ಮುಚ್ಚಿದೆ. ಸಿಬಿಐನ ಈ ಕ್ರಮವು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ರಾಜಕೀಯ ಸೇಡಿನ ಸ್ಪಷ್ಟ ಪ್ರಕರಣವಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮತ್ತೆ ಕೆದಕಿರುವುದು ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ಡಿಕೆ ಶಿವಕುಮಾರ್ ಅವರಿಗೆ ಕಿರುಕುಳ ಮಾಡುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ. ಶಿವಕುಮಾರ್ ವಿರುದ್ಧ ಸಿಬಿಐ 2020 ರಲ್ಲಿ ಪ್ರಕರಣ ದಾಖಲಿಸಿದ್ದು, 2013 ಮತ್ತು 2018 ರ ನಡುವೆ ಅವರು 74 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯನ್ನು ಗಳಿಸಿದ್ದಾರೆ ಎಂದು ಆರೋಪಿಸಿದ್ದರು, ಅದು ಅವರ ಆದಾಯಕ್ಕೆ ಅನುಗುಣವಾಗಿಲ್ಲ ಎಂದು ಆರೋಪಿಸಲಾಗಿದೆ.