ಬೆಂಗಳೂರು: ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕ್ ಗಾಂಧೀನಗರದ ಸಹ ಪ್ರಧಾನ ಕಾರ್ಯಾಲಯದಲ್ಲಿ ಕನ್ನಡ ಬಳಗದ ಸದಸ್ಯರು ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.
ದಿನಾಂಕ 16-11-2023 ರ ಸಂಜೆ ಜರುಗಿದ ಸಮಾರಂಭದಲ್ಲಿ ಹೆಸರಾಂತ ಗಾಯಕರಾದ ಗುರುರಾಜ ಹೊಸಕೋಟೆ ಮತ್ತು ಶಶಿಧರ ಕೋಟೆಯವರು ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡವು ಕನ್ನಡ ನಾಡಿನಲ್ಲಿ ಕನ್ನಡಿಗರ ನಿರಭಿಮಾನದಿಂದ ನಲುಗುತ್ತಿದೆಯೆಂದು ವಿಷಾದ ವ್ಯಕ್ತ ಪಡಿಸಿದ ಗುರುರಾಜ ಹೊಸಕೋಟೆಯವರು ಐದೂವರೆ ಸಾವಿರಗಳಿಗೂ ಅಧಿಕ ಹಾಡುಗಳನ್ನು ಬರೆದು ಹಾಡಿದ್ದರೂ ಎಲ್ಲೂ ತಮ್ಮ ಹೆಸರನ್ನು ನಮೂದಿಸಿಕೊಂಡಿಲ್ಲ ಎಂದು ತಿಳಿಸಿದರು.
ಶ್ರೀ ಶಶಿಧರ ಕೋಟೆಯವರು ಮಾತನಾಡಿ ನಾವೆಲ್ಲರೂ ಭಾರತೀಯರು, ಕನ್ನಡಿಗರು, ಭಾಷೆಗಳು ಬೇರೆ ಬೇರೆಯಾದರೂ ನಮ್ಮೆಲ್ಲರ ಸಂಸ್ಕೃತಿ, ಆಚರಣೆಗಳಲ್ಲಿ ಸಾಮ್ಯತೆ ಇದೆ ಎಂದರು. ಕೆನರಾ ಬ್ಯಾಂಕ್ ಕೇಂದ್ರ ಸರ್ಕಾರದ ಒಂದು ಉಪಕ್ರಮವಾಗಿ ಎಲ್ಲ ಭಾಷಿಕರನ್ನು ಒಟ್ಟಾಗಿಸಿಕೊಂಡು ಈ ನೆಲದ ಅಸ್ಮಿತೆಯನ್ನು ಉಳಿಸಿಕೊಂಡಿದೆ ಎಂದು ಅಭಿಪ್ರಾಯ ಪಟ್ಟರು. ತಮ್ಮ ಮಧುರ ಕಂಠದಿಂದ ಇಬ್ಬರೂ ಅತಿಥಿಗಳು ಸಭಿಕರನ್ನು ರಂಜಿಸಿದರು.
ಉಪ ಮಹಾ ಪ್ರಬಂಧಕರಾದ ಶ್ರೀ ಮುರಳೀಧರ ಕಲ್ಕೂರ ಸ್ವಾಗತ ಕೋರಿದರು. ವಿಭಾಗೀಯ ಪ್ರಬಂಧಕರಾದ ಶ್ರೀ ರಮೇಶ ಶರ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಪ್ರಬಂಧಕರಾದ ಶ್ರೀ ಜಗದೀಶ್ ಟಿ ಮತ್ತು ವರಿಷ್ಟ ಪ್ರಬಂಧಕ ಶ್ರೀ ಗಿರಿಯಪ್ಪ ಅತಿಥಿಗಳ ಪರಿಚಯ ಮಾಡಿದರು.
ಮಹಾ ಪ್ರಬಂಧಕರಾದ ಶ್ರೀ ಭಾಸ್ಕರ ಚಕ್ರವರ್ತಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡ ಭಾಷೆಯ ಪ್ರಾಚೀನತೆಯನ್ನು, ಸಾಹಿತ್ಯ ಕ್ಷೇತ್ರದ ಸಾಧನೆಯನ್ನು, ಇತ್ತೀಚೆಗೆ ಕನ್ನಡ ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಳನ್ನು ಸ್ಮರಿಸಿದರು. ತಾವು ಮೂಲತಃ ತೆಲುಗು ಭಾಷಿಕರಾದರೂ ಕನ್ನಡ ಭಾಷೆಯ, ನೆಲದ ಬಗೆಗಿನ ತಮ್ಮ ಅಭಿಮಾನ ಗೌರವಗಳನ್ನು ನಿದರ್ಶನಗಳ ಮೂಲಕ ಅಭಿವ್ಯಕ್ತಿಗೊಳಿಸಿದರು. ಮಹಾ ಪ್ರಬಂಧಕರುಗಳಾದ ಶ್ರೀಕಾಂತ ಮಹಾಪಾತ್ರ ಮತ್ತು ರವಿಪ್ರಕಾಶ್ ಜಯಸ್ವಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆನರಾ ಬ್ಯಾಂಕ್ ಕನ್ನಡ ಸಂಘದ ಅಧ್ಯಕ್ಷರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದ ಶ್ರೀಯುತ ವೆಂಕಟೇಶ ಶೇಷಾದ್ರಿಯವರನ್ನು ಇದೇ ಸಂದರ್ಭದಲ್ಲಿ ಅತಿಥಿಗಳ ಜೊತೆಯಲ್ಲಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಣೆಯನ್ನು ಕನ್ನಡ ಬಳಗದ ಶ್ರೀ ಶ್ರೀಕಾಂತ ಪತ್ರೆಮರರವರ ತಂಡ ನಡೆಸಿಕೊಟ್ಟಿತು. ಕೆನರಾ ಬ್ಯಾಂಕ್ ನೌಕರರು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಟ್ಟರು.
ರಾಜ್ಯೋತ್ಸವ ಆಚರಣೆಯು ಕೇವಲ ಕೆಲ ಸ್ಪರ್ಧೆ, ಕಾರ್ಯಕ್ರಮಗಳಿಗೆ, ದಿನಗಳಿಗೆ ಸೀಮಿತವಾಗಬಾರದೆಂಬ ಉದ್ದೇಶದಿಂದ ಕನ್ನಡ ಬಳಗವು ತಿಂಗಳು ಪೂರ್ತಿ ನಿತ್ಯೋತ್ಸವದ ರೀತಿಯಲ್ಲಿ ಇನ್ನೂ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ನವೆಂಬರ್ ಒಂದನೇ ತಾರೀಖು ಕನ್ನಡ ಧ್ವಜಾರೋಹಣ ಮಾಡಿ ಸಹಪ್ರಧಾನ ಕಾರ್ಯಾಲಯದ ಎಲ್ಲ ನೌಕರರಿಗೆ ಸಿಹಿ ವಿತರಣೆ ಮಾಡಲಾಯಿತು. ಸಿಬ್ಬಂದಿಗೆ ರಂಗೋಲಿ ಸ್ಪರ್ಧೆ, ಕನ್ನಡಿಗರಿಗೆ, ಕನ್ನಡೇತರರಿಗೆ ರಸ ಪ್ರಶ್ನೆ ಸ್ಪರ್ಧೆ, ಆಯೋಜನೆ ಮಾಡಿದ್ದಾಗಿ ಸಹಾಯಕ ಮಹಾ ಪ್ರಬಂಧಕರಾದ ಶ್ರೀ ಎಮ್.ಪಿ. ಪ್ರವೀಣ್ ತಿಳಿಸಿದರು.
ಪುಷ್ಪ ರಂಗೋಲಿಯೊಂದಿಗೆ ಜಿಲ್ಲೆಯೊಂದರ ಪರಿಚಯವನ್ನು ದಿನಕ್ಕೊಂದರಂತೆ ಭವನದ ನೆಲ ಮಹಡಿಯ ಪ್ರವೇಶ ದ್ವಾರದಲ್ಲಿ ನವೆಂಬರ್ ತಿಂಗಳು ಪೂರ್ತಿ ಮಾಡುತ್ತಿರುವ ವಿನೂತನ ಆಚರಣೆಯನ್ನು ಸಾರ್ವಜನಿಕರು ಗಮನಿಸ ಬಹುದಾಗಿದೆ ಎಂದು ಉಪ ಮಹಾ ಪ್ರಬಂಧಕರಾದ ಶ್ರೀ ಪಾರ್ಶ್ವನಾಥರು ತಿಳಿಸಿದರು.
ಶ್ರೀಮತಿ ಶ್ರೀವಿದ್ಯಾರವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ವಿಭಾಗೀಯ ಪ್ರಬಂಧಕರಾದ ಶ್ರೀ ಪ್ರಹ್ಲಾದ ವಿ. ನಗರಹಳ್ಳಿಯವರು ವಂದನಾರ್ಪಣೆ ಮಾಡಿದರು. ಕನ್ನಡ ಬಳಗದ ಶ್ರೀ ಶ್ರೀಕಾಂತ ಪತ್ರೆಮರ, ಶ್ರೀ ಪ್ರದೀಪ್ ಕುಮಾರ್, ಶ್ರೀ ವಿನಯ ನಿರವಾಣಿ, ಶ್ರೀ ಜ್ವಾಲೇಂದ್ರ, ಶ್ರೀ ಸಿದ್ದಲಿಂಗ ಗಡ್ಡೆ, ಶ್ರೀಮತಿ ಮಮತಾ, ಶ್ರೀಮತಿ ಅನಿತಾ ಮಂಜುನಾಥ್, ಶ್ರೀ ಸುನಿಲ್ ಮುಂತಾದವರು ರಾಜ್ಯೋತ್ಸವದ ಸ್ಪರ್ಧೆಗಳನ್ನು ಮತ್ತು ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಬ್ಯಾಂಕ್ನ ಹಿರಿಯ ಅಧಿಕಾರಿಗಳು, ನೌಕರರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದು ಗಮನಾರ್ಹವಾಗಿತ್ತು.