ದೇವನಹಳ್ಳಿ: ಶ್ರೀಸೇವಾಲಾಲ್ ಮಹಾರಾಜ್ ಜಯಂತಿ ಅರ್ಥಪೂರ್ಣವಾಗಿ ಆಚರಿಸು ತ್ತಿದ್ದೇವೆ. ಅವರ ನೀತಿ, ಸಿದ್ಧಾಂತ ಮತ್ತು ತತ್ವಾದರ್ಶಗಳ ವ್ಯಕ್ತಿತ್ವವನ್ನು ನಮ್ಮ ಬಂಜಾರ ಸಮುದಾಯವು ಇಂದಿಗೂ ಅನುಸರಿಸಿಕೊಂಡು ಬಂದಿರುವುದು ವಿಶೇಷ ಎಂದು ಬೆಂ.ಗ್ರಾ.ಜಿಲ್ಲೆಯ ಬಂಜಾರ ಸಮುದಾಯದ ಸಂಘದ ಉಪಾಧ್ಯಕ್ಷ ಶೆಟ್ಟಿ ನಾಯಕ್ ಹೇಳಿದರು.
ದೇವನಹಳ್ಳಿ ಪಟ್ಟಣದಲ್ಲಿರುವ ತಾಲೂಕು ಕಚೇರಿಯಲ್ಲಿ “ಮಹಾ ತಪಸ್ವಿ ಸಮಾಜ ಸುಧಾರಕರಾದ ಸಂತ ಶ್ರೀಸೇವಾಲಾಲ್ ಮಹಾರಾಜ್ ಜಯಂತಿ”ಯನ್ನು ಆಚರಿಸಿ ಮಾತನಾಡಿದರು.ಸಮಾಜ ಸುಧಾರಕರಾದ ಸಂತ ಶ್ರೀಸೇವಾಲಾಲ್ ಮಹಾರಾಜ್ ರವರು ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರೂ ಶಿಕ್ಷಿತರಾಗಿ ಅಕ್ಷರ ಜ್ಞಾನವನ್ನು ಪಡೆದು ಜಗತ್ತಿಗೆ ದಾರಿ ದೀಪವಾಗಿ ಎಂದು ಹೇಳಿದರು.
ಸೇವಾ ಲಾಲರು ತಮ್ಮ ತತ್ವಗಳ ಮೂಲಕ ಲೋಕಕ್ಕೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದ್ದರು ಎಂದರು.
ತಾಲ್ಲೂಕು ಸರ್ವೆಯರ್ ಮತ್ತು ನಿರ್ದೇಶಕ ಗಿರೀಶ್ ನಾಯಕ್ ಭಾರತ ಖಂಡದ ಧಾರ್ಮಿಕ ರಾಯಭಾರಿ ಎಂದೇ ಹೆಸರಾದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ ಗೆದ್ದವರು.
ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ, ಜಗದಂಬೆಯ ಆರಾಧಕರಾಗಿ ಇಡೀ ಜೀವಮಾನದುದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲರು, ಇಂದಿಗೂ ಜನ ಮಾನಸದಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ. ಜನತೆಗೆ ವ್ಯಸನ ಮುಕ್ತರಾಗಿ ಎಂದು ಬೋಧಿಸಿದ ಸೇವಾಲಾಲರು ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ನೀತಿಮಾತು ಹೇಳಿದ್ದರು.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಂಜಾರ ಸಮುದಾಯ ಸಂಘದ ಕಾರ್ಯದರ್ಶಿ ರವಿಕುಮಾರ್ ನಾಯಕ್, ಖಜಾಂಚಿ ರಾಥೋಡ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಕೃಷ್ಣಕುಮಾರ್, ನಿರ್ದೇಶಕರಾದ ತುಕಾರಾಮ್, ಜಯನಾಯಕ್ ಭಾಗವಹಿಸಿದ್ದರು.