ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ.
ಮನ:ಪೂರ್ವಕವಾಗಿ ಮದುವೆಯಾಗಿ ಮನ:ಪೂರ್ವಕವಾಗಿಯೇ ದೂರವಾದ ಇಬ್ಬರು ಈಗ ತಮ್ಮ ತಮ್ಮ ಬದುಕಿನ ಸಂತೆಯಲ್ಲಿ ನೆಮ್ಮದಿ ಹುಡುಕುತ್ತಿದ್ದಾರೆ. ವಿಚ್ಚೇದನದ ನಂತರ ನಿವೇದಿತಾ ಗೌಡ ರೀಲ್ಸು ಪಾಲ್ಸು ಎಂದು ಮತ್ತೆ ಬ್ಯುಸಿಯಾದರೆ, ಚಂದನ್ ಶೆಟ್ಟಿ ಸಂಗೀತ-ಸಾಹಿತ್ಯ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಇದರ ನಡುವೆ ಸಮಯ ಬಿಡುವು ಮಾಡಿಕೊಂಡು ತಮ್ಮ ವ್ಯೆಯಕ್ತಿಕ ಬದುಕಿನ ಏರಿಳಿತದ ಬಗ್ಗೆ ಮಾತನಾಡಿದ್ದಾರೆ. ಪಶ್ಚಾತಾಪದ ಮಾತುಗಳನ್ನೂ ಆಡಿದ್ದಾರೆ.
ಹೌದು, ರ್ಯಾಪಿಡ್ ರಶ್ಮಿ ಎದುರು ಕುಳಿತು ತಮ್ಮ ಬದುಕಿನ ಪುಟಗಳನ್ನು ಮೆಲುಕು ಹಾಕಿರುವ ಚಂದನ್ ಶೆಟ್ಟಿ, ಒಂದು ಹಾಡು ಕೇವಲ ಒಬ್ಬನಿಂದ ಮಾತ್ರ ಗೆಲ್ಲಲ್ಲ. ಅದರ ಹಿಂದೆ ಹಲವರ ಶ್ರಮ ಇರುತ್ತೆ ಎಂದಿದ್ದಾರೆ.
ಅಹಂಕಾರ ನನಗೆ ಇಲ್ಲ ಎಂದು ಹೇಳಿದ್ದಾರೆ. ಇನ್ನೂ.. ಚಂದನ್ ಶೆಟ್ಟಿ ಬದುಕು ಬದಲಾಗಿದ್ದು 2015ರ ಆಚೀಚೆ. ಆಗ ಸಂಗೀತ ಪ್ರಿಯರ ಬಾಯಲ್ಲಿ ಇವರ ಹಾಡು ನಲಿಯುತ್ತಿತ್ತು. ಇವರ ಹೆಸರಿಗೆ ಚಿನ್ನದ ಬೆಲೆ ಬಂದಿತ್ತು. ಸಹಜವಾಗಿ ಹಣದ ಮಳೆ ಕೂಡ ಆಗ್ತಿತ್ತು. ಜೀವನ ಶೈಲಿ ಬದಲಾದಂತೆ ಖರ್ಚು-ವೆಚ್ಚ ಕೂಡ ಹೆಚ್ಚಾಗಿತ್ತು. ಇದಕ್ಕೆ ಒಂದು ಉದಾಹರಣೆ ಎಂಬಂತೆ ಗೆಜೆಟ್ಗಳನ್ನು ವಿಪರೀತ ಖರೀದಿ ಮಾಡಲು ಚಂದನ್ ಶೆಟ್ಟಿ ಶುರು ಮಾಡಿದ್ದರು. ನಿವೇದಿತಾ ಗೌಡ ಜೊತೆ ಮದ್ವೆ ಕೂಡ ಆದರು. ಇವರ ಮದ್ವೆಯಲ್ಲಿ ಅದ್ಧೂರಿತನ ಎಷ್ಟರ ಮಟ್ಟಿಗೆ ಹಾಸು ಹೊಕ್ಕಿತ್ತು ಅಂದರೆ ಮದುವೆಗೆ ಐವತ್ತರಿಂದ ಅರವತ್ತು ಲಕ್ಷ ರೂಪಾಯಿ ಖರ್ಚು ಆಗಿತ್ತು. ಖುದ್ದು ಚಂದನ್ ಶೆಟ್ಟಿ ಸಂದರ್ಶನದಲ್ಲಿ ಮದ್ವೆಯ ಖರ್ಚು-ವೆಚ್ಚದ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.