ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಾತೆತ್ತಿದರೆ ಒಂದು ರಾಷ್ಟ್ರ ಎನ್ನುತ್ತಾರೆ. ಆದರೆ ಒಂದೇ ರಾಷ್ಟ್ರದಲ್ಲಿ ತಮ್ಮದೇ ಸರ್ಕಾರವಿರುವ ಗೋವಾ ಸರ್ಕಾರವು ಕನ್ನಡಿಗರನ್ನು ಶತ್ರುಗಳನ್ನಾಗಿ ನೋಡುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದೇಕೆ?, ಒಂದು ರಾಷ್ಟ್ರ ಎಂಬ ಪರಿಕಲ್ಪನೆ ಎಂದರೆ ಇದೇನಾ?, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಬಿಜೆಪಿಯೇತರ ರಾಜ್ಯಗಳ ಮೇಲೆ ಏನು ದಬ್ಬಾಳಿಕೆ ನಡೆಸಿದರೂ ಸಹಿಸಿಕೊಂಡಿರಬೇಕೆ ಎಂದು ಡಾ. ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.
ಉತ್ತರ ಗೋವಾದ ಸಾಂಗೋಲ್ಡಾ ಪ್ರದೇಶದಲ್ಲಿರುವ ಕನ್ನಡಿಗರ 15 ಮನೆಗಳನ್ನು ಜೆಸಿಬಿ ಬಳಸಿ ನೆಲಸಮಗೊಳಿಸಿರುವುದನ್ನು ಖಂಡಿಸಿ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ನಾಲ್ಕಾರು ದಶಕಗಳಿಂದ ನೆಲೆಸಿರುವ ಕನ್ನಡಿಗರ ಮೇಲೆ ಗೋವಾ ಸರ್ಕಾರ ನಡೆಸುತ್ತಿರುವ ಅಮಾನವೀಯ ಕೃತ್ಯಗಳು ಖಂಡನಾರ್ಹ. ನ್ಯಾಯಾಲಯದ ನಿರ್ದೇಶನಗಳನ್ನು ಮೀರಿ ಏಕಾಏಕಿ ಮನೆಗಳನ್ನೆಲ್ಲ ಒಡೆದು ಬೀದಿಪಾಲು ಮಾಡಿರುವುದು ಅಕ್ಷಮ್ಯ.
ಗೋವಾದ ಮತದಾರರಾಗಿ, ಗೋವಾ ಅಭಿವೃದ್ಧಿಗೆ ಸತತ ಶ್ರಮಿಸುತ್ತಿರುವ ಕನ್ನಡಿಗರ ಮನೆಗಳನ್ನು ಜೆಸಿಬಿ ಬಳಸಿ ನೆಲಸಮಗೊಳಿಸುತ್ತಿರುವುದು ಅಘಾತಕಾರಿ. ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ತಕ್ಷಣ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಿ ಪುನರ್ವಸತಿ ಕಲ್ಪಿಸಿಕೊಡಬೇಕು ಹಾಗೂ ಕೇಂದ್ರ ಸರ್ಕಾರ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಜೊತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಬೇಕು ಒತ್ತಾಯಿಸಿದರು.
ಗೋವಾದ ದಬ್ಬಾಳಿಕೆ ವಿರುದ್ಧ ಕರ್ನಾಟಕದ 26 ಸಂಸದರು ಧ್ವನಿಯೆತ್ತುತ್ತಿಲ್ಲ ಏಕೆ?, ಅವರನ್ನು ಸಂಸತ್ತಿಗೆ ಆರಿಸಿ ಕಳುಹಿಸಿರುವುದು ಕನ್ನಡಿಗರ ಹಿತ ಕಾಯುವುದಕ್ಕೋ ಅಥವಾ ಬಿಜೆಪಿ ಆಡಳಿತದ ಸರ್ಕಾರಗಳು ಕನ್ನಡಿಗರ ಮೇಲೆ ಏನೇ ದೌರ್ಜನ್ಯ ಎಸಗಿದರು ಬಾಯಿಮುಚ್ಚಿಕುಳಿತುಕೊಳ್ಳುವುದಕ್ಕೋ?, ಕನ್ನಡ ಭಾಷೆ, ಕಾವೇರಿ ನೀರು, ಕನ್ನಡಿಗರ ಹಿತಾಸಕ್ತಿಗೆ ನಯಾಪೈಸೆಯ ಬೆಲೆ ಕೊಡದ ಇಂತಹ ಸಂಸದರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ನಿಷ್ಠುರವಾಗಿ ನುಡಿದರು.ಗೋವಾದಲ್ಲಿ ಮನೆ ಕಳೆದುಕೊಂಡಿರುವ ಕನ್ನಡಿಗರ ನೆರವಿಗೆ ಧಾವಿ ಸಬೇಕು. ಕನ್ನಡಿಗರ ಮೇಲಿನ ದೌರ್ಜನ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಸಂತ್ರಸ್ತರ ಬೆನ್ನಿಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.