ರಾಯಗಢ: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಬದಲಾಗುತ್ತಿದ್ದು, ಆರ್ಥಿಕವಾಗಿ ಶಕ್ತಿಯಾಲಿಯಾಗುತ್ತಿದೆ. ಈ ಪರಿವರ್ತನೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
ಅಗರವಾಲ್ ಸಮುದಾಯ ನಗರದಲ್ಲಿ ನಿರ್ಮಿಸಿರುವ ‘ಆಗ್ರೋಹ ಧಾಮ’ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ವೇಳೆ ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಉಪಸ್ಥಿತರಿದ್ದರು.
ಭಾರತ ಇಂದು ಮೋದಿ ಅವರ ನಾಯಕತ್ವದಲ್ಲಿ ಬದಲಾಗುತ್ತಿದೆ. ಆರ್ಥಿಕವಾಗಿ ಅತ್ಯಂತ ಪ್ರಬಲ ರಾಷ್ಟ್ರವಾಗುವತ್ತ ಹೆಜ್ಜೆ ಇಟ್ಟಿದೆ. ಈ ಆರ್ಥಿಕ ಪರಿವರ್ತನೆಗೆ ನಾವೆಲ್ಲ ಸಹಕಾರ ನೀಡಬೇಕು. ನಮ್ಮ ಯುವಕರು, ನವೋದ್ಯೋಗಿಗಳಾಗಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಬಿರ್ಲಾ ಕರೆ ನೀಡಿದ್ದಾರೆ.
ಸಮಾಜವು ಸರ್ಕಾರದೊಂದಿಗೆ ಸಾಮೂಹಿಕವಾಗಿ ಕೆಲಸ ಮಾಡಬೇಕಾಗುತ್ತದೆ. 140 ಕೋಟಿ ಜನರೂ ಒಟ್ಟಾಗಿ ಕೆಲಸ ಮಾಡಿದರೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಶಪಥ ಈಡೇರಿಸಲು ಸಾಧ್ಯ ಎಂದು ಪ್ರಧಾನಿಯವರು ಹೇಳಿದ್ದು ಆ ಕಾರಣಕ್ಕಾಗಿಯೇ ಎಂದು ಪ್ರತಿಪಾದಿಸಿದ್ದಾರೆ.