ಚನ್ನರಾಯಪಟ್ಟಣ: ಭೂಸ್ವಾಧೀನ ವಿರೋಧಿ ಹೋರಾಟದ ಅನಿರ್ದಿಷ್ಟಾವಧಿ ಧರಣಿಗೆ 800 ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಇಂದು ಚನ್ನರಾಯಪಟ್ಟಣ ಧರಣಿ ಸ್ಥಳದಲ್ಲಿ ಸಭೆ ಸೇರಿದ ರೈತರು ಮಹತ್ವದ ಮಾತುಕತೆಯನ್ನು ನಡೆಸಿದರು.ಚುನಾವಣೆಯ ಸಂದರ್ಭದಲ್ಲಿ ಮತ ಬಹಿಷ್ಕಾರ ಮಾಡಲು ಮುಂದಾಗಿದ್ದ ರೈತರನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ದುಂಬಾಲು ಬಿದ್ದು,
ಚುನಾವಣೆಯ ನಂತರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ವೇದಿಕೆ ಕಲ್ಪಿಸಿ ರೈತರಿಗೆ ನ್ಯಾಯ ಒದಗಿಸುವುದಾಗಿ ತಿಳಿಸಿ, ಮತದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಚುನಾವಣೆ ಮುಗಿದು ಕೇಂದ್ರದಲ್ಲಿ ಸರ್ಕಾರವೇ ರಚನೆಯಾಗಿದೆ. ಅಂದು ಜಿಲ್ಲಾಡಳಿತ ಮತ್ತು ಸರ್ಕಾರದ ಮಂತ್ರಿಗಳು ಕೊಟ್ಟ ಮಾತಿನಂತೆ ಮಾತುಕತೆಗೆ ಅನುವು ಮಾಡದಿರುವುದನ್ನು ವಿರೋಧಿಸಿ ಇಂದು ಸಭೆಯಲ್ಲಿ ಚರ್ಚಿಸಲಾಯಿತು.
ಲೋಕಸಭೆ ಚುನಾವಣೆಯ ನಂತರ ನಡೆದ ಮಹತ್ವದ ಸಭೆ ಇದಾಗಿದ್ದು ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.ಪ್ರಾಸ್ಥಾವಿಕವಾಗಿ ಮಾತನಾಡಿದ ಕಾರಳ್ಳಿ ಶ್ರೀನಿವಾಸ್, ಮುಂದಿನ ಹೋರಾಟದ ಕುರಿತು ಜನರು ಅಭಿಪ್ರಾಯ ವ್ಯಕ್ತಪಡಿಸುವಂತೆ ತಿಳಿಸಿದಾಗ, ಜನರು ಚುನಾವಣೆ ಬಹಿಷ್ಕಾರ ಮಾಡಿದ್ದ ಸಂದರ್ಭದಲ್ಲಿ ಧರಣಿ ಸ್ಥಳಕ್ಕೆ ಬಂದು ಸರ್ಕಾರದ ಜೊತೆಗೆ ಮಾತುಕತೆ ಮಾಡಿಸುವುದಾಗಿ ಜಿಲ್ಲಾಧಿಕಾರಿಗಳು ಆಶ್ವಾಸನೆ ನೀಡಿದ್ದು ಈ ಕುರಿತಾಗಿ ಅವರನ್ನು ಭೇಟಿ ಮಾಡಿ ಶೀಘ್ರದಲ್ಲಿ ಸಭೆ ಕರೆಯುವಂತೆ ಒತ್ತಾಯ ಮಾಡೋಣ ಮತ್ತು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ಮಾಡಿಸಲು ಜವಾಬ್ದಾರಿ ತೆಗೆದುಕೊಂಡಿದ್ದ ಉಸ್ತುವಾರಿ ಸಚಿವರನ್ನು ಎಚ್ಚರಿಸೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಅದೇ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕ ಪ್ರಾತ್ಯ ರೈತಸಂಘದ ಯಶವಂತ್, ನಮ್ಮ ಸುತ್ತಲ ರೈತರೊಂದಿಗೆ ಸಹಿ ಸಂಗ್ರಹದ ಮೂಲಕ ಜಾಗೃತಿಗೆ ಮುಂದಾಗುವಂತೆ ಸಲಹೆ ನೀಡಿದರು.ಶಾಶ್ವತ ನೀರಾವರಿ ಹೋರಾಟಗಾರರಾದ ಆಂಜನೇಯರೆಡ್ಡಿಯವರು ಮಾತನಾಡಿ, ಮೊದಲಿಗೆ ಜಿಲ್ಲಾಡಳಿತ, ಉಸ್ತುವಾರಿ ಸಚಿವರನ್ನು ಬೇಟಿಮಾಡಿದ ನಂತರ ಸಮಸ್ಯೆ ಬಗೆಹರಿಯದಿದ್ದರೆ, ವಿಧಾನಸಭಾ ಅಧಿವೇಶನವನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಎಲ್ಲಾ ಸಂಘಟನೆಗಳ ಮುಖಂಡರ ಸಭೆ ಕರೆದು ಅಧಿವೇಶನದ ಸಂದರ್ಭದಲ್ಲಿ ತೀವ್ರ ಸ್ವರೂಪದ ಹೋರಾಟವನ್ನು ರೂಪಿಸಲು ಸಲಹೆ ನೀಡಿದರು.
ನಾಳೆ, ಗುರವಾರ ಮದ್ಯಾನ ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಲು ರೈತರು ತೆರಳಲಿದ್ದಾರೆ. ಜೊತೆ ಇದೇ ವಾರಾಂತ್ಯದೊಳಗಿ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪನವರನ್ನು ಬೇಟಿ ಮಾಡಲಿದ್ದು ನಂತರ ತಿಂಗಳ ಕೊನೆಯ ವಾರದಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಸಭೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.ಇಂದಿನ ಸಭೆಯಲ್ಲಿ ಹೋರಾಟಗಾರ್ತಿ ಪ್ರಭಾ ಬೆಳವಂಗಲ, ವಕೀಲರಾದ ಸಿದಾರ್ಥರವರು, ಅಶ್ವಥಪ್ಪ, ನಲ್ಲಪ್ಪನಹಳ್ಳಿ ನಂಜಪ್ಪ, ವೆಂಕಟರಮಣಪ್ಪ, ವೆಂಕಟೇಶ್, ದೇವರಾಜು, ಲೋಕೇಶ್, ಮೋಹನ್, ನಂಜೇಗೌಡ, ಪ್ರಕಾಶ್, ಗಣೇಶ್ ಸೇರಿದಂತೆ ರೈತರು, ರೈತಮಹಿಳೆಯರು ಭಾಗಿಯಾಗಿದ್ದರು.