ಬೆಂಗಳೂರು: ಹೊರ ರಾಜ್ಯಗಳಿಂದ ಅಂಚೆ ಮೂಲಕ ನಗರಕ್ಕೆ ಕಳುಹಿಸುತ್ತಿದ್ದ ಲಕ್ಷಾಂತರ ಮೌಲ್ಯದ ಚರಸ್ ಜಪ್ತಿ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂಚೆ ಮೂಲಕ ಚರಸ್ ಬರುತ್ತಿರುವ ಖಚಿತವಾದ ಮಾಹಿತಿಯನ್ನು ಆಧರಿಸಿ ಸಿಸಿಬಿ ಪೊಲೀಸರು ತಪಾಸಣೆ ತೀವ್ರಗೊಳಿಸಿದಾಗ ಚರಸ್ ಮಾದಕ ವಸ್ತು ಗಿಫ್ಟ್ ಬಾಕ್ಸ್ ರೂಪದಲ್ಲಿ ಅಂಚೆ ಮೂಲ ನಗರಕ್ಕೆ ಬಂದಿದೆ. ಈ ಗಿಫ್ಟ್ ಬಾಕ್ಸ್ ಅನ್ನು ಜಾರ್ಖಂಡ್ ಮೂಲದ ರಿತಿಕ್ ರಾಜ್ ಎಂಬುವನು ಪಡೆಯುತ್ತಿದ್ದ ತಕ್ಷಣವೇ ಆತನನ್ನು ಬಂಧಿಸಿ ಬಾಕ್ಸ್ ತೆಗೆಸಿದಾಗ ಅದರಲ್ಲಿ ಚರಸ್ ಇರುವುದು ಪತ್ತೆಯಾಗಿದೆ.
ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ರಿಷಿಕೇಷದಿಂದ ಅಂಚೆ ಮೂಲಕ ಚರಸ್ ಕಳುಸಿದ್ದನು. ಇತ್ತ ರಿತಿಕ್ ರಾಜ್ ಅರೆಸ್ಟ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ಆರೋಪಿ ಅದಿತ್ ಸರ್ವೋತ್ತಮ್ ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.