ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶರಾಗಿದ್ದಾರೆ.
ಬುಧವಾರ ರಾತ್ರಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (74) ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ವೈದ್ಯರ ತಂಡ ಮಠಕ್ಕೆ ಆಗಮಿಸಿ ಚಿಕಿತ್ಸೆ ನೀಡುತ್ತಿತ್ತು. ಬಳಿಕ ಬೆಳ್ಳೂರು ಕ್ರಾಸ್‍ನಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ವಾಮೀಜಿಗಳನ್ನು ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ 4.30ರ ಸುಮಾರಿಗೆ ಹೃದಯಾಘಾತದಿಂದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ ಹೊಂದಿದರು.
ಕರ್ನಾಟಕದ ಜೈನ ಸಮುದಾಯದ ಹಿರಿಯ ಸ್ವಾಮೀಜಿಗಳಾಗಿದ್ದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 7 ಮಹಾಮಸ್ತಕಾಭಿಷೇಕವನ್ನು ನೆರವೇರಿಸಿದ್ದರು. ಮೇ 3, 1949ರಲ್ಲಿ ಜನಿಸಿದ್ದ ಶ್ರೀಗಳು 1970ರಲ್ಲಿ ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು.
ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಗಳ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
Leave a Review