ಟಿಂ ಡೇವಿಡ್ ಅವರ ಬೊಂಬಾಟ್ ಬ್ಯಾಟಿಂಗ್ ಗೆ ಬೆಚ್ಚಿಬಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ವಿರುದ್ಧ 43 ರನ್ ಗಳ ಅಂತರದಿದ ಪರಾಭವಗೊಂಡಿದೆ. ಈ ಮೂಲಕ ರಜತ್ ಪಾಟೀದಾರ್ ಬಳಗ ಸೀಸನ್ ನಲ್ಲಿ ನಿರಂತರ ಎರಡನೇ ಗೆಲುವು ದಾಖಲಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರೆ, ಸಿಎಸ್ ಕೆ ನಿರಂತರ 3ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿಯೇ ಮುಂದುವರಿದಿದೆ.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭರ್ತಿ 250 ರನ್ ಕಲೆ ಹಾಕಿದರು. ಇದಕ್ಕೆ ಉತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟ್ ಆಯಿತು. ದೊಡ್ಡ ಮೊತ್ತ ಬೆಂಬತ್ತಿ ಹೊರಟ ಚೆನ್ನೈ ತಂಡ 3 ಓವರ್ ಮುಗಿಯುವುದರೊಳಗಾಗಿ ನಾಯಕ ಋತುರಾಜ್ ಗಾಯಕ್ವಾಡ್ (3 ಎಸೆತದಲ್ಲಿ 7) ಸಂಜು ಸ್ಯಾಮ್ಸನ್ (5 ಎಸೆತದಲ್ಲಿ 9) ಮತ್ತು ಆಯುಷ್ ಮ್ಹಾತ್ರೆ(3 ಎಸೆತದಲ್ಲಿ 1) ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸರ್ಫರಾಝ್ ಖಾನ್ ಪ್ರತಿರೋಧ ತೋರಿ ಚೆನ್ನೈ ಇನ್ನಿಂಗ್ಸ್ ಗೆ ಜೀವ ತುಂಬಿದರು. 25 ಎಸೆತಗಳಿಂದ 8 ಬೌಂಡರಿ ಮತ್ತು 2 ಸಿಕ್ಸರ್ ಗಳಿದ್ದ 50 ರನ್ ಗಳಿಸಿ ಔಟಾದರು.ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಪ್ರಶಾಂತ್ ವೀರ್(16 ಎಸೆತಗಳಲ್ಲಿ 37) ಮತ್ತು ಜಾಮಿ ಓವರ್ಟನ್ (16 ಎಸೆತಗಳಲ್ಲಿ 37) ಸಿಡಿದಿದ್ದರಿಂದ ತಂಡದ ಮೊತ್ತ ಮೊತ್ತ 200 ದಾಟಿತು. ಆದರೆ ಗೆಲುವಿನ ಸಮೀಪ ತಲುಪಲು ಸಾಧ್ಯವಾಗಲೇ ಇಲ್ಲ.ಟಿಂ ಡೇವಿಡ್ ಸಿಕ್ಸರ್ ಗಳ ಸುರಿಮಳೆ ಇದಾದ ಬಳಿಕ ಅಕ್ಷರಶಃ ನಡೆದದ್ದು ಟಿಂ ಡೇವಿಡ್ ಶೋ. ಪರಿಣಾಮ 14 ಓವರ್ ಗಳಲ್ಲಿ 151 ರನ್ ಗಳಿಸಿದ್ದ ಆರ್ ಸಿಬಿ 20 ಓವರ್ ಗಳು ಮುಗಿಯುವುದರೊಳಗೆ 250ರ ಗಡಿ ತಲುಪಿತು. ಕೇವಲ 21 ಎಸೆತಗಳಲ್ಲಿ 50 ರನ್ ಪೂರೈಸಿದ ಟಿಂ ಡೇವಿಡ್ ಅವರು 3 ಬೌಂಡರಿ ಮತ್ತು 8 ಸಿಕ್ಸರ್ ಗಳಿದ್ದ ಅಜಯ 70 ರನ್ ಬಾರಿಸಿದರು. ನಾಯಕ ರಜತ್ ಪಾಟೀದಾರ್ ಅವರು 19 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದ 48 ರನ್ ಗಳಿಸಿ ಅಜೇಯರಾಗುಳಿದರು.



