ರಾಯಪುರ: ಬಿಜೆಪಿ ಶಾಸಕ ವಿಷ್ಣುದೇವ್ ಸಾಯ್ ಅವರು ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.
‘ಚುನಾವಣೆಯಲ್ಲಿ ಬಿಜೆಪಿಯು ಐತಿಹಾಸಿಕ ಗೆಲುವು ಸಾಧಿಸಿರುವಂತೆಯೇ, ಸಾಯ್ ಮತ್ತು ಸಚಿವ ಸಂಪುಟದ ಪ್ರಮಾಣವಚನ ಕಾರ್ಯಕ್ರಮವೂ ಐತಿಹಾಸಿಕವಾಗಲಿದೆ’ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಅರುಣ್ ಸಾವ್ ಹೇಳಿದ್ದಾರೆ.
ಕುಂಕುರಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಬುಡಕಟ್ಟು ಸಮುದಾಯದ ಪ್ರಭಾವಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಾಯ್ ಅವರನ್ನು, ಡಿಸೆಂಬರ್ 10ರಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು.
ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆಗುತ್ತಿದ್ದಂತೆಯೇ ಸಾಯ್ ಅವರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.