ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ‘ಸಾಯಿ ಕೃಷ್ಣ’ ಅಂತರರಾಷ್ಟ್ರೀಯ ಕ್ರೀಡಾಂಗಣ ಉದ್ಘಾಟನೆಯ ಅಂಗವಾಗಿ ಜ.18ರಂದು ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ನಾಯಕತ್ವದಲ್ಲಿ ‘ಟಿ20’ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
‘ಒಂದೇ ವಿಶ್ವ ಒಂದೇ ಕುಟುಂಬ’ದ ಹೆಸರಿನಲ್ಲಿ ನಡೆಯುವ ಸೌಹಾರ್ದ ಪಂದ್ಯದಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರು ಮೈದಾನಕ್ಕೆ ಇಳಿಯಲಿದ್ದಾರೆ. ಸಚಿನ್ ಒಂದು ತಂಡ ಮುನ್ನಡೆಸಿದರೆ, ಯುವರಾಜ್ ಸಿಂಗ್ ಮತ್ತೊಂದು ತಂಡ ಮುನ್ನಡೆಸುವರು.
ಮಾಜಿ ಕ್ರಿಕೆಟಿಗರಾದ ಸುನೀಲ್ ಗವಾಸ್ಕರ್, ಮುತ್ತಯ್ಯ ಮುರಳೀಧರನ್, ಸನತ್ ಜಯಸೂರ್ಯ, ಚಮಿಂದ ವಾಸ್, ಮಾಂಟಿ ಪನೇಸರ್, ಇರ್ಫಾನ್ ಪಠಾಣ್, ಮಹಮ್ಮದ್ ಕೈಪ್, ಯೂಸುಫ್ ಪಠಾಣ್, ವೆಂಕಟೇಶ್ ಪ್ರಸಾದ್ ಮತ್ತಿತರರು ‘ಟಿ20’ಯಲ್ಲಿ ಭಾಗವಹಿಸುವರು.