ಶೆನ್ಜೆನ್: ಏಷ್ಯನ್ ಗೇಮ್ಸ್ ಚಾಂಪಿಯನ್ನರಾದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ನೇರ ಸೆಟ್ಗಳಿಂದ ಇಂಡೊನೇಷ್ಯಾದ ಲಿಯೊ ರೋಲಿ ಕರ್ನಾಂಡೊ ಮತ್ತು ಡೇನಿಯಲ್ ಮಾರ್ಟಿನ್ ಅವರನ್ನು ಸೋಲಿಸಿ ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ ಸೆಮಿಫೈನಲ್ ತಲುಪಿತು.
ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸಾತ್ವಿಕ್- ಚಿರಾಗ್ ಜೋಡಿ 21-16, 21-14 ರಿಂದ ಕರ್ನಾಂಡೊ- ಮಾರ್ಟಿನ್ ಜೋಡಿಯನ್ನು ಸೋಲಿಸಿತು. ಭಾರತದ ಆಟಗಾರರು, ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಇಂಡೊನೇಷ್ಯಾ ಜೋಡಿಯನ್ನು ಮಣಿಸಲು 46 ನಿಮಿಷ ತೆಗೆದುಕೊಂಡರು.
ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಭಾರತದ ಆಟಗಾರರು ಶನಿವಾರ ಸೆಮಿಫೈನಲ್ನಲ್ಲಿ ಚೀನಾದ ಹಿ ಜಿ ಟಿಂಗ್ ಮತ್ತು ರೆನ್ ಷಿಯಾಂಗ್ ಯು ಜೋಡಿಯನ್ನು ಎದುರಿಸಲಿದ್ದಾರೆ. ಎಂಟರ ಘಟ್ಟದ ಪಂದ್ಯದಲ್ಲಿ ಟಿಂಗ್- ರೆನ್ ಜೋಡಿ 21-15, 21-15 ರಿಂದ ಸ್ವದೇಶದ ಲಿಯು ಯು ಚೆನ್- ಉಕ್ಸುವಾನ್ ಯಿ ಜೋಡಿಯನ್ನು ನೇರ ಗೇಮ್ಗಳಿಂದ ಸೋಲಿಸಿತು. ಯು ಚೆನ್- ಉಕ್ಸುವಾನ್ ಇಲ್ಲಿ ಎಂಟನೇ ಶ್ರೇಯಾಂಕ ಪಡೆದಿದ್ದರು.