ಬ್ಯಾಂಕಾಕ್: ಭಾರತದ ಸ್ಟಾರ್ ಶಟ್ಲರ್ಗಳಾದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಥಾಯ್ಲೆಂಡ್ ಓಪನ್ ಸೂಪರ್ 500 ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಇದರಿಂದ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಹೋರಾಡಲು ಹೊಸ ಸ್ಫೂರ್ತಿ ಪಡೆದಿದ್ದಾರೆ.
ಭಾನುವಾರ ನಡೆದ ಪ್ರಶಸ್ತಿ ಕಾಳಗದಲ್ಲಿ ವಿಶ್ವದ ನಂ. 3 ಜೋಡಿಯಾದ ಚಿರಾಗ್-ಸಾತ್ವಿಕ್ ಸೇರಿಕೊಂಡು 29ನೇ ರ್ಯಾಂಕಿಂಗ್ನ ಚೀನ ಆಟಗಾರರಾದ ಚೆನ್ ಬೊ ಯಾಂಗ್-ಲಿಯು ಯಿ ವಿರುದ್ಧ 21-15, 21-15 ಅಂತರದ ಗೆಲುವು ಸಾಧಿಸಿದರು. ಇದು ಚಿರಾಗ್-ಸಾತ್ವಿಕ್ ಜೋಡಿಗೆ ಒಲಿದ 8ನೇ ಬಿಡಬ್ಲ್ಯುಎಫ್ ಪ್ರಶಸ್ತಿ. ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಸಾತ್ವಿಕ್-ಚಿರಾಗ್ ಜೋಡಿಗೆ ಈ ಸೀಸನ್ನಲ್ಲಿ ಒಲಿದ 2ನೇ ಬ್ಯಾಡ್ಮಿಂಟನ್ ಪ್ರಶಸ್ತಿ ಇದಾಗಿದೆ.
ಇದಕ್ಕೂ ಮೊದಲು ಮಾರ್ಚ್ನಲ್ಲಿ ಫ್ರೆಂಚ್ ಓಪನ್ ಸೂಪರ್ 750 ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿದ್ದರು. ಮಲೇಷ್ಯಾ ಸೂಪರ್ 1000 ಮತ್ತು ಇಂಡಿಯಾ ಸೂಪರ್ 750 ಕೂಟಗಳಲ್ಲಿ ರನ್ನರ್ ಅಪ್ ಆಗಿದ್ದರು.ಥಾಯ್ಲೆಂಡ್ ನಮ್ಮ ಪಾಲಿನ ಅದೃಷ್ಟದ ತಾಣ. 2019ರಲ್ಲಿ ನಾವಿಲ್ಲಿ ಚಾಂಪಿಯನ್ ಆಗಿದ್ದೆವು. ಅನಂತರ ಇಂದಿನ ತನಕ ಬಹಳಷ್ಟು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಒಲಿಂಪಿಕ್ಸ್ ಸೇರಿದಂತೆ ಮುಂಬರುವ ಅನೇಕ ಪ್ರಮುಖ ಟೂರ್ನಿಗಳಿಗೆ ಈ ಗೆಲುವು ಸ್ಫೂರ್ತಿ ತುಂಬಲಿದೆ ಎಂಬ ನಂಬಿಕೆ ನಮ್ಮದು ಎಂಬುದಾಗಿ ಸಾತ್ವಿಕ್ ಹೇಳಿದ್ದಾರೆ.