ನವದೆಹಲಿ: ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋಪಟು ನೀರಜ್ ಚೋಪ್ರಾ ಅವರು ಮೇ 10ರಂದು ಆರಂಭವಾಗುವ ಡೈಮಂಡ್ ಲೀಗ್ ಸರಣಿಯ ದೋಹಾ ಲೆಗ್ನಲ್ಲಿ ಹೊಸ ಋತು ಆರಂಭಿಸುವ ಸಿದ್ಧತೆಯಲ್ಲಿದ್ದಾರೆ.
ಚೀನಾದ ಹಾಂಗ್ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದೊಂದಿಗೆ ತನ್ನ ಹಿಂದಿನ ಋತುವನ್ನು ಮುಗಿಸಿದ್ದ 26 ವರ್ಷದ ಚೋಪ್ರಾ, ಜುಲೈ- ಆಗಸ್ಟ್ನಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನವನ್ನು ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದಾರೆ.
2023ರ ಬುಡಾಪೆಸ್ಟ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಐದನೇ ಸ್ಥಾನ ಪಡೆದಿದ್ದ ಭಾರತದ ಮತ್ತೊಬ್ಬ ಜಾವೆಲಿನ್ ಥ್ರೋ ಅಥ್ಲೀಟ್ ಕಿಶೋರ್ ಜೇನಾ ಅವರು ಕತಾರ್ ರಾಜಧಾನಿಯಲ್ಲಿ ನಡೆಯುವ ಡೈಮಂಡ್ ಲೀಗ್ಗೆ ಪದಾರ್ಪಣೆ ಮಾಡಲಿದ್ದಾರೆ. ಅವರು ಏಷ್ಯನ್ ಗೇಮ್ಸ್ನಲ್ಲಿ 87.54 ಮೀ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕ ಗೆದ್ದಿದ್ದರು.
ಡೈಮಂಡ್ ಲೀಗ್ನಲ್ಲಿ ಚೋಪ್ರಾ, ಜೇನಾ ಅವರು ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಜೆಕ್ ಗಣರಾಜ್ಯದ ಜೇಕಬ್ ವಡ್ಲೇಚಾ ಮತ್ತು ಮಾಜಿ ವಿಶ್ವ ಚಾಂಪಿಯನ್ ಗ್ರೆನೆಡಾದ ಆಯಂಡರ್ಸನ್ ಪೀಟರ್ಸ್ ಅವರಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದ್ದಾರೆ. ‘ಈ ವರ್ಷ ಒಲಿಂಪಿಕ್ಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಪ್ರಮುಖ ಗುರಿಯಾಗಿದೆ. ಅದರ ಜತೆಗೆ 90 ಮೀ ಗಡಿಯನ್ನು ದಾಟುವ ಪ್ರಯತ್ನವೂ ಮುಂದುವರಿಯಲಿದೆ.