ರಾಮನಗರ: 30 ವರ್ಷಗಳಿಂದ ನಗರಸಭೆಯಲ್ಲಿ ಅಭಿವೃದ್ಧಿ ಕುಂಠಿತ ಗೊಂಡಿದೆ. ಮುಂದೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಭರವಸೆ ಇದ್ದು ನಗರ ಮತ್ತಷ್ಟು ಅಭಿವೃದ್ಧಿ ಕಾಣುತ್ತದೆ ಎಂದು ನಗರಸಭಾ ಸದಸ್ಯ ಕೆ.ಶೇಷಾದ್ರಿ(ಶಶಿ) ತಿಳಿಸಿದರು.
ನಗರದ ಐದನೇ ವಾರ್ಡಿನಲ್ಲಿ ನಗರೋತ್ಥಾನ ನಿಧಿಯಲ್ಲಿ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ಸಂದರ್ಭದಲ್ಲಿ ಅವರು ಸುದ್ದಿಗಾರ ರೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗುತ್ತಾರೆ ಇದು ನಮ್ಮಲ್ಲಿ ವಿಶ್ವಾಸ ತರಿಸಿದೆ. ಜಿಲ್ಲೆಯಲ್ಲೂ ಕೂಡ ಸಾಕಷ್ಟು ಬದಲಾವಣೆ ಕಾಣಲಿದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರ ಬರುತ್ತದೆ ಎನ್ನುವ ಬಲವಾದ ವಿಶ್ವಾಸ ನಮ್ಮಲ್ಲಿದೆ.
ಜನರ ಆಶಯ ಆಗ ಖಂಡಿತ ನೆರವೇರಲಿದೆ ನೆನೆಗುದಿಗೆ ಬಿದ್ದಿರುವ ಅನೇಕ ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ನೆರವೇರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇವೆ. 24 ಗಂಟೆ ಕುಡಿಯುವ ನೀರಿನ ಪೈಪುಗಳು ಮತ್ತು ಗ್ಯಾಸ್ ಪೈಪ್‍ಗಳ ಅಳವಡಿಕೆ ಕಾಮಗಾರಿಗಳು ಮುಗಿದ ನಂತರ ಉಳಿಕೆ ಕಾಮಗಾರಿಗಳು ನಡೆಯುತ್ತವೆ.
ರಾಮನಗರದ ಮತ್ತಷ್ಟು ಅಭಿವೃದ್ಧಿಗೆ ವಿಧಾನಸಭೆ ಚುನಾವಣೆ ನಂತರ ನಮ್ಮ ಅಧ್ಯಕ್ಷರು ಹಾಗೂ ಸದಸ್ಯರು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಉಳಿದಂತೆ ರಸ್ತೆ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಬಿ.ಕೆ.ಪವಿತ್ರ, ಸದಸ್ಯರಾದ ಸೋಮಶೇಖರ್, ಆರ್.ಮುತ್ತುರಾಜ್, ಮುಖಂಡರಾದ ಜಯರಾಂ, ಗೋವಿಂದರಾಜು, ರಘು ಸೇರಿದಂತೆ ಇನ್ನು ಮುಂತಾದ ವಾರ್ಡಿನ ಹಿರಿಯರು, ಮುಖಂಡರು ಇದ್ದರು.
Leave a Review