ಕನಕಪುರ: ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯೇ ಪ್ರಥಮ ವಾಗಿದ್ದು ಆಡಳಿತ ಭಾಷೆಯಾಗಿ ಕನ್ನಡ ಭಾಷೆಯನ್ನು ಬಳಸಲಾಗುತ್ತಿದೆ. ಸರ್ಕಾರವು ಶೇ.70 ರಷ್ಟು ಕನ್ನಡ ಬಳಸುವಂತೆ ಆದೇಶ ಮಾಡಿದೆ,ಆದರೂ ನಾಮಫಲಕ, ಪೋಸ್ಟರ್ ಗಳಲ್ಲಿ ಕನ್ನಡ ಭಾಷೆಯನ್ನು ಬಳಸುತ್ತಿಲ್ಲ ಎಂದು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕಬ್ಬಾಳೇಗೌಡ ಆರೋಪಿಸಿದರು.
ಅಂಗಡಿ, ಮುಂಗಟ್ಟುಗಳು, ಮಾಲ್ಗಳಲ್ಲಿ ಕನ್ನಡ ಭಾಷೆ ಯನ್ನು ಬಳಸದ ಬೋರ್ಡ್ ಹಾಗೂ ನಾಮಫಲಕ ಗಳನ್ನು ಬುಧವಾರ ಕರವೇಯಿಂದ ತೆರವುಗೊಳಿಸುವ ಹೋರಾಟ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕನ್ನಡ ನಾಡಿ ನಲ್ಲಿನ ಎಲ್ಲರೂ ಪ್ರತಿ ಸಂದರ್ಭದಲ್ಲೂ ಕನ್ನಡ ಭಾಷೆ ಬಳಸಬೇಕು,ಅಂಗಡಿ ಮುಂಗಟ್ಟುಗಳ ನಾಮ ಫಲಕ ಗಳಲ್ಲಿ ಶೇಕಡ 70 ರಷ್ಟು ಕನ್ನಡ ಬಳಸಲು ರಾಜ್ಯ ಸರ್ಕಾರ ಆದೇಶಿಸಿ ಫೆಬ್ರವರಿ 28 ರ ಗಡುವು ನೀಡಿದೆ. ಅಷ್ಟರಲ್ಲಿ ಎಲ್ಲರೂ ಕನ್ನಡ ಭಾಷೆಯಲ್ಲಿ ಬೋರ್ಡ್, ಫ್ಲೆಕ್ಸ್ ಗಳನ್ನು ಬರೆಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಅಂಗಡಿ ಮಾಲೀಕರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಕರವೇ ಯಿಂದ ರಾಜ್ಯ ವ್ಯಾಪ್ತಿ ಹೋರಾಟ ನಡೆಸಿ ನಾಮಫಲಕಗಳ ತೆರವು ಕಾರ್ಯಾಚರಣೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ನಾಮ ಫಲಕಗಳ ತೆರವು ಕಾರ್ಯಾಚರಣೆ ಹೋರಾಟ ವನ್ನು ಕನಕಪುರದಲ್ಲಿ ಪ್ರಾರಂಭಿಸಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ಕಗ್ಗಲಿಪುರ ಸೇರಿದಂತೆ ಕನಕಪುರ ದಿಂದ ಬೆಂಗಳೂರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಹಾಕಿದಂತಹ ಪ್ಲೆಕ್ಸ,ಬೋರ್ಡುಗಳನ್ನ ತೆರೆವುಗೊಳಿಸಿದರು ಕರವೇ ಜಿಲ್ಲಾ ಉಪಾಧ್ಯಕ್ಷ ಪುಟ್ಟಸ್ವಾಮಿ, ಹಾರೋಹಳ್ಳಿ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಭೀಮ ಲಿಂಗೇಗೌಡ, ತಾಲ್ಲೂಕು ಉಪಾಧ್ಯಕ್ಷ ಮಾರೇಗೌಡ, ಮುಖಂಡರಾದ ಪ್ರಕಾಶ್ ಆರಾಧ್ಯ, ಆಕಾಶ್, ಅರುಣ್ ಕುಮಾರ್, ನಾರಾಯಣ್, ಹರೀಶ್ ಕುಮಾರ್ ಸೇರಿದಂತೆ ನೂರಾರು ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಂಡಿದ್ದರು.