ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನುಕಣಕ್ಕಿಳಿಸಲು ತೀವ್ರ ಬಿಕ್ಕಟ್ಟು ಎದುರಾಗಿದೆ.
ಮುಂದಿನ ತಿಂಗಳು 13ರಂದು ನಡೆಯಲಿರುವ ಚುನಾವಣಾ ಹಿನ್ನೆಲೆಯಲ್ಲಿ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಒಟ್ಟು 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಶಾಸಕರ ಸಂಖ್ಯಾಬಲದ ಪ್ರಕಾರ ಆಡಳಿತ ರೂಢಾ ಕಾಂಗ್ರೆಸ್ ಪಕ್ಷಕ್ಕೆ 11 ಸ್ಥಾನ ಬಿಜೆಪಿಗೆ 3 ಹಾಗೂ ಜೆಡಿಎಸ್ 1 ಸ್ಥಾನ ಲಭ್ಯವಾಗಲಿದೆ.
ಕಾಂಗ್ರೆಸ್ ಪಕ್ಷದಲ್ಲಿ 7 ಸ್ಥಾನಗಳಿಗೆ ಈಗಾಗಲೇ 100ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಪ್ರತಿಯೊಬ್ಬರು ಸ್ಥಾನಗಿಟ್ಟಿಸಲು ಪಕ್ಷದ ವರಿಷ್ಠರಿಂದ ಹಿಡಿದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರುತ್ತಿದ್ದಾರೆ.ಅಭ್ಯರ್ಥಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆ ಪಕ್ಷದ ವರಿಷ್ಠರಿಗೆ ಬಿಡಲು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಅರ್ಹತೆ ಬಗ್ಗೆ ಸಮಾಲೋಚನೆ ನಡೆಸಿ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಸೂಚಿಸಲು ಮುಖ್ಯಮಂತ್ರಿಯವರು ಮತ್ತು ಉಪಮುಖ್ಯಮಂತ್ರಿಯವರು ದೆಹಲಿಗೆ ತೆರಳುತ್ತಿದ್ದಾರೆ.ನಾಳೆ ಬೆಳಿಗ್ಗೆ 11 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ, ಮುಖಂಡರಾದ ರಾಹುಲ್ಗಾಂಧಿ, ರಾಜ್ಯ ಉಸ್ತುವಾಗಿ ರಣದೀಪ್ಸಿಂಗ್ ಸುರ್ಜೇವಾಲಾ, ಕೆ.ಸಿವೇಣುಗೋಪಾಲ್ ಮತ್ತಿತರರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
ನಾಳೆ ದೆಹಲಿಯಲ್ಲೇ ವಾಸ್ತವ್ಯಹೂಡುವ ಇಬ್ಬರು ನಾಯಕರು ಬುಧವಾರ ಸಹ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ಮುಂದುವರಿಸಲಿದ್ದಾರೆ.
ಇಂದು ಸಹ ಬೆಂಗಳೂರಿನಲ್ಲಿ ಅಭ್ಯರ್ಥಿ ಆಕಾಂಕ್ಷಿಗಳು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ಭೇಟಿಯಾಗಿ ತಮಗೆ ಪರಿಷತ್ ಸ್ಥಾನ ಕಲ್ಪಿಸಲು ಮನವಿ ಮಾಡುತ್ತಿದ್ದಾರೆ.