ದೇವನಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು.ನಂತರ ಮಾತನಾಡಿದ ಮುಖ್ಯಮಂತ್ರಿಗಳು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಒಟ್ಟು 600 ಇಂದಿರಾ ಕ್ಯಾಂಟೀನ್ಗಳು ತಲೆ ಎತ್ತಲಿವೆ. 188 ಹೊಸ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸುತ್ತಿದ್ದೇವೆ. ಈ ಪೈಕಿ ಈಗಾಗಲೇ 40 ಸಿದ್ಧವಾಗಿವೆ.
ವಿಮಾನನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಬೇಕೆಂದು ಟ್ಯಾಕ್ಸಿ ಚಾಲಕರು ಹಾಗೂ ಇತರೆ ಚಾಲಕರ ಬೇಡಿಕೆಯಿತ್ತು. ಇಲ್ಲಿಗೆ ಇಂದಿರಾ ಕ್ಯಾಂಟೀನ್ ಅಗತ್ಯವಿತ್ತು. ಅದಕ್ಕಾಗಿ ಇಂದು ಒಂದು ಕ್ಯಾಂಟೀನನ್ನು ಉದ್ಘಾಟಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಒಟ್ಟು 2 ಇಂದಿರಾ ಕ್ಯಾಂಟೀನ್ ಸ್ಥಾಪನೆಯಾಗಲಿದೆ.
ಬಡವರಿಗೆ ಕಡಿಮೆ ದರಗಳಲ್ಲಿ ಊಟ ತಿಂಡಿ ದೊರೆಯಬೇಕೆನ್ನುವುದು ಇದರ ಉದ್ದೇಶ. ಬೆಳಗಿನ ಉಪಾಹಾರ 5 ರೂ. ಮಧ್ಯಾಹ್ನ ಮತ್ತು ರಾತ್ರಿ ಊಟ 10. ರೂ.ಗಳಿಗೆ ದೊರಕಲಿದೆ. ಆಹಾರದ ಮೆನು ಕೂಡ ಬದಲಾಯಿಸಲಾಗಿದೆ. ಕುಳಿತು ತಿನ್ನಲು ಅನುಕೂಲವಾಗಲೆಂದು ಡೈನಿಂಗ್ ಹಾಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರಿನ ಪ್ರತಿ ವಾರ್ಡ್ನಲ್ಲಿ ಹಾಗೂ ರಾಜ್ಯದ ಇತರೆಡೆಗಳಲ್ಲಿ ಕೂಡ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಹಿಂದಿನ ಸರ್ಕಾರ ಊಟ ಪೂರೈಸದೇ, ಕೆಲವನ್ನು ಮುಚ್ಚಿಯೂಬಿಟ್ಟಿತ್ತು. ಬಡವರು ಊಟ ಮಾಡಬೇಕೆಂಬ ಕಾರಣಕ್ಕೆ ನಾವು ಪುನ: ಪ್ರಾರಂಭಿಸಿದ್ದೇವೆ.
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದೆಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಕೂಡ 2-3 ಸಭೆಗಳನ್ನು ನಡೆಸಿದ್ದು, ಎಷ್ಟೇ ಹಣ ವೆಚ್ಚವಾದರೂ ಟ್ಯಾಂಕರ್ ಮೂಲಕ, ಹೊಸ ಕೊಳವೆಬಾವಿಗಳಿರಬಹುದು ಅಥವಾ ಕಾವೇರಿ ನೀರನ್ನಾದರೂ ಕೊಡುವ ಮೂಲಕ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು , ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೇರಿದಂತೆ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.