This is the title of the web page
This is the title of the web page

ಗಾಂಧೀ ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಬೇಕು: ಸಿಎಂ

ಬೆಂಗಳೂರು: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ಈ ದಿನದ ಬಗ್ಗೆ ನಾವು ಚಿಂತನೆ ಮಾಡಿ ಆತ್ಮಾವಲೋಕನ ಮಾಡಿಕೊಂಡು ಗಾಂಧೀಜಿಯವರ ಮಾರ್ಗದಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಸಂಕಲ್ಪವನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ವಿಧಾನಸೌಧ ಮತ್ತು ವಿಕಾಸಸೌಧದ ನಡುವಿನ ಮಹಾತ್ಮಾ ಗಾಂಧಿಜೀಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಮಹಾತ್ಮಾ ಗಾಂಧಿ ಅವರು ಹೇಳಿರುವಂತೆ ಅವರ ಜೀವನವೇ ಒಂದು ಸಂದೇಶ. ಅವರ ಜೀವನವನ್ನು ಓದಿ, ತಿಳಿದುಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಅವರ ಜೀವನದ ಆಧಾರ ನೈತಿಕತೆ ಮತ್ತು ಸತ್ಯ. ಇವೆರಡನ್ನೂ ಅತ್ಯಂತ ಶುದ್ಧವಾಗಿ ಪ್ರತಿಪಾದಿಸಿದ್ದರು. ಸದಾಕಾಲ ತಮ್ಮನ್ನು ತಾವೇ ಪರೀಕ್ಷೆಗೆ ಒಳಪಡಿಸಿಕೊಂಡು ಪರಿಶುದ್ಧ ವಾಗುತ್ತಿದ್ದರು. ಇಂಥ ಪ್ರಕ್ರಿಯೆ ಗಾಂಧೀಜಿಯವರು ಜೀವನದುದ್ದಕ್ಕೂ ನಡೆಸಿಕೊಂಡು ಬಂದಿರುವುದು ನಾವು ನೋಡುತ್ತೇವೆ. ಅಹಿಂಸೆಯಲ್ಲಿ ಬಹಳ ದೊಡ್ಡ ಶಕ್ತಿ ಇದೆ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟವರು. ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವವರಲ್ಲಿ ಮುಂಚೂಣಿ ಯಲ್ಲಿದ್ದರು ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಅನಾಮಧೇಯರು ತಮ್ಮ ಆಸ್ತಿಪಾಸ್ತಿಗಳನ್ನು ತ್ಯಾಗ ಮಾಡಿದ್ದರು. ಗಟ್ಟಿ ನಿಲುವು ತೆಗೆದುಕೊಂಡು ಹೋರಾಟಕ್ಕೆ ಹೊಸ ದಿಕ್ಸೂಚಿ ನೀಡಿದ ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಲೋಕ ಮಾನ್ಯ ತಿಲಕ್ ಮುಂತಾದವರೂ ಕೂಡ ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಇವೆಲ್ಲವನ್ನೂ ಕ್ರೋಢಿಕರಿಸಿ ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿ ಸತ್ಯಾಗ್ರಹ ನಡೆಸಿ ಆಂದೋಲನ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪರಿವರ್ತನೆ ಮಾಡಿ ಬ್ರಿಟಿಷರ ಜೊತೆ ಕಠಿಣ ಮಾತುಕತೆ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದರು.

ಗಾಂಧೀಜಿ ಅವರ ತತ್ವ ಆದರ್ಶಗಳ ಮೇಲೆ ಈ ದೇಶದ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಬರುವುದು ಅಗತ್ಯವಿದೆ. ಒಂದು ರೀತಿಯಲ್ಲಿ ರಾಷ್ಟ್ರೀಯ ವ್ಯಕ್ತಿತ್ವ ಗಾಂಧಿಜಿಯವರಲ್ಲಿ ಇತ್ತು. ದೇಶಕ್ಕೆ ಬಹಳ ದೊಡ್ಡ ಚರಿತ್ರೆ ಇದೆ. ಬೇಕಾಗಿರುವುದು ಚಾರಿತ್ರ್ಯ. ಅವರಿಗೆ ಭಾವಪೂರ್ವಕವಾಗಿ, ಹೃದಯಾಂತರಾಳದಿಂದ, ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಬಜೆಟ್‍ನಲ್ಲಿ ಎಲ್ಲ ವರ್ಗದವರಿಗೆ ಆದ್ಯತೆ ನೀಡಲಾಗುತ್ತದೆ. ರೈತರು, ಮಹಿಳೆಯರು, ಕಾರ್ಮಿಕರು ಎಲ್ಲರಿಗೂ, ವಿಶೇಷವಾಗಿ ದುಡಿಯುವ ವರ್ಗಕ್ಕೆ ಆದ್ಯತೆ ನೀಡಲಾಗುತ್ತದೆ. ಆರ್ಥಿಕವಾಗಿ ಅವರನ್ನು ಮೇಲೆತ್ತುವ ಕೆಲಸ ಪ್ರಾಥಮಿಕವಾಗಿ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳು ಇರಲಿವೆ ಎಂದರು. ಸಂಪುಟ ವಿಸ್ತರಣೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.