ಬೆಂಗಳೂರು: 2024ರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ತನ್ನದೇ ಆದ ರೀತಿಯಲ್ಲಿ ಕಾರ್ಯತಂತ್ರಗಳನ್ನು ಮಾಡಿಕೊಂಡಿದ್ದು, ಈ ಬಾರಿ ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಹಾಕಲೇಬೇಕೆಂದು ಪಣತೊಟ್ಟು ಪ್ರಚಾರದ ಕಾರ್ಯವನ್ನು ಆರಂಭಿಸುತ್ತಿದೆ.
ಇಂದು ಅಧಿಕೃತವಾಗಿ 2024ರ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಕರ್ನಾಟಕದ ಮೂಡಲಬಾಗಿಲು ಎಂದೇ ಹೇಳಲಾಗುತ್ತಿರುವ ಮುಳಬಾಗಿಲನ ಕುರುಡುಮಲೈ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ನ ವತಿಯಿಂದ ಚುನಾವಣಾ ಪ್ರಚಾರಕ್ಕೆ ನೀಡಲಾಗುತ್ತಿದೆ.
ಪ್ರಚಾರದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದಿನಿಂದ ತಮ್ಮ ಪಕ್ಷದ ಪರವಾಗಿ ಚುನಾವಣ ಪ್ರಚಾರವನ್ನು ಆರಂಭ ಮಾಡುತ್ತಿದ್ದೇವೆ. ನಾವು ಸತ್ಯದ ಪ್ರಚಾರ ಮಾಡುತ್ತಿದ್ದೇವೆ, ಬಿಜೆಪಿ ಸುಳ್ಳಿನ ಪ್ರಚಾರ ಮಾಡುತ್ತಿದೆ ಎಂದು ಬಿಜೆಪಿ ಪ್ರಚಾರವನ್ನು ಟೀಕಿಸಿದ್ದಾರೆ.
ಈಗಾಗಲೇ ತಾವು ಪ್ರಚಾರಕ್ಕಾಗಿ ಮೈಸೂರಿನಲ್ಲಿ ಮೂರು ದಿನ ಇದ್ದು ಚಿತ್ರದುರ್ಗಕ್ಕೂ ಹೋಗಿದ್ದೆ. ಇಂದಿನಿಂದ ಅಧಿಕೃತವಾಗಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರು ಇಂದಿನಿಂದ ಪ್ರಚಾರಕ್ಕಾಗಿ ರಾಜ್ಯ ಪ್ರವಾಸ ಆರಂಭಿಸಿದ್ದಾರೆ.
ಮೊದಲ ಹಂತದ ಚುನಾವಣೆ ನಡೆಯಲಿರುವ 14 ಕ್ಷೇತ್ರಗಳಲ್ಲಿ ಜಯ ಗಳಿಸಲು ಪಣತೊಟ್ಟಿರುವ ಉಭಯ ನಾಯಕರು, ಹಳೆಯ ಮೈಸೂರು ಭಾಗದ ಚಾಮರಾಜನಗರ, ಮೈಸೂರು-ಕೊಡಗು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಲು ಪ್ರವಾಸ ಕಾರ್ಯಕ್ರಮವನ್ನು ನಿಗಧಿಪಡಿಸಿದ್ದಾರೆ.