This is the title of the web page
This is the title of the web page

ಸಿಎಂ, ಸಿದ್ದು ನಾಮಪತ್ರ ಶಿಕಾರಿಪುರದಲ್ಲಿ ವಿಜಯೇಂದ್ರ-ಹುಬ್ಬಳ್ಳಿಯಲ್ಲಿ ಶೆಟ್ಟರ್-ಕೊರಟಗೆರೆಯಲ್ಲಿ ಪರಮೇಶ್ವರ ಕಣಕ್ಕೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆಯದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಪ್ರಮುಖ ನಾಯಕರುತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಾವು ಪ್ರತಿನಿಧಿಸುವ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಿತ್ರನಟ ಸುದೀಪ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.

ಶಿಗ್ಗಾವಿಯಲ್ಲಿಂದು ಬೊಮ್ಮಾಯಿ ಅವರು ಬೃಹತ್ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಸಭೆ ಹಿನ್ನೆಲೆಯಲ್ಲಿ ಶಿಗ್ಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ. 4 ಕೆಎಸ್‍ಆರ್‍ಪಿ ಸೇರಿದಂತೆ ಸಾಕಷ್ಟು ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‍ನ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲಿ ನಾಮಪತ್ರ ಸ್ಲಲಿಕೆ ಮಾಡುತ್ತಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಇಂದು ಬೆಳಿಗ್ಗೆ ತಮ್ಮ ಹುಟ್ಟೂರಾದ ಸಿದ್ರಾಮನಹುಂಡಿಗೆ ಭೇಟಿ ನೀಡಿ ಸಿದ್ದರಾಮೇಶ್ವರ ದೇವಾಲಯ ಹಾಗೂ ಶ್ರೀರಾಮಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಗ್ರಾಮಸ್ಥರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು.

ತದನಂತರ ಚಾಮುಂಡಿಬೆಟ್ಟ ಉತ್ತನಳ್ಳಿಗೆ ಭೇಟಿ ನೀಡಿ ಅಲ್ಲಿಂದ ನಂಜನಗೂಡಿಗೆ ತೆರಳಿ ಸಾರ್ವಜನಿಕರ ಸೇವೆಯಲ್ಲಿ ಪಾಲ್ಗೊಂಡು, ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ ಸಹ ಇಂದು ನಾಮಪತ್ರ ಸ್ಲಲ್ಲಿಕ ಮಾಡಿದ್ದಾರೆ. ಶೆಟ್ಟರ್ ನಾಮಪತ್ರ ಸಲ್ಲಿಕೆ ವೇಳೆ ಮುಖಂಡ ಎ.ಎಂ. ಹಿಂಡಸಗೇರಿ ಮತ್ತಿತರರ ಮುಖಂಡರು ಜತೆಗಿದ್ದರು.

ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹ ನಾಮಪತ್ರ ಸ್ಲಲಿಕೆ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿ ಮಾಜಿಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕಾರ್ಯಕರ್ತರೊಂದಿಗೆ ಆಗಮಿಸಿ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು.