ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಸಂಪುಟ ಹಲವು ಸಚಿವರಿಗೆ ಉಪಹಾರ ಕೂಟಕ್ಕೆ ಆಹ್ವಾನಿಸಿ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಇಂದು ಬೆಳಿಗ್ಗೆ ತಮ್ಮ ಕಾವೇರಿ ನಿವಾಸದಲ್ಲಿ ನಡೆಸಿದ ಉಪಹಾರ ಕೂಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕೆ. ಎಚ್ ಮುನಿಯಪ್ಪ, ಪ್ರಿಯಾಂಕ ಖರ್ಗೆ, ಎಂ.ಬಿ.ಪಾಟೀಲ್, ಕೆ.ಎನ್. ರಾಜಣ್ಣ, ಈಶ್ವರ್ ಖಂಡ್ರೆ, ಕೃಷ್ಣಬೈರೇಗೌಡ, ಸಂತೋಷ್ ಲಾಡ್, ಭೈರತಿ ಸುರೇಶ್, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದ್ರಾಜ್, ಮತ್ತಿತರರು ಪಾಲ್ಗೊಂಡಿದ್ದರು.
ಸಚಿವ ಸತೀಶ್ ಜಾರಕಿಹೊಳಿ ಅನಾರೋಗ್ಯದ ಕಾರಣದಿಂದ ಗೋಕಾಕ್ನಲ್ಲಿ ಕಳೆದೆರೆಡು ದಿನಗಳಿಂದ ವಿಶ್ರಾಂತಿ ಪಡೆಯುತ್ತಿರುವ ಹಿನ್ನೆಯಲ್ಲಿ ಇಂದಿನ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ. ಮತ್ತೋರ್ವ ಸಚಿವ ಕೆ.ಜೆ. ಜಾರ್ಜ್ ದೆಹಲಿ ಪ್ರವಾಸದಲ್ಲಿರುವ ಕಾರಣ ಸಭೆಗೆ ಆಹಮಿಸಿರಲಿಲ್ಲ.
ಸಭೆಗೂ ಮುನ್ನ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸಲು ಮುಖ್ಯಮಂತ್ರಿಯವರು ಸಭೆ ಕರೆದಿದ್ದಾರೆ.ಇದರಲ್ಲಿ ಬೇರೆ ವಿಶೇಷವೇನು ಇಲ್ಲಎಂದು ತಿಳಿಸಿದರು.
ಮುಖ್ಯಮಂತ್ರಿ ಬದಲಾವಣೆ ಸಂಬಂಧ ಕೇಳಿದ ಪ್ರಶ್ನೆಗೆ ಈ ಬಗ್ಗೆ ನನಗೆ ಗೊತ್ತಿಲ್ಲ. ದಲಿತ ಸಿಎಂ ವಿಚಾರವೂ ನನಗೆ ತಿಳಿದಿಲ್ಲ. ನನಗೆ ಇಲಾಖೆಗೆ ಸಂಂಬಂಧಪಟ್ಟಿದ್ದು, ಏನಾದರೂ ಕೇಳಿ ಉತ್ತರಿಸುತ್ತೇನೆ ಎಂದಷ್ಟೇ ತಿಳಿಸಿ ಅಲ್ಲಿಂದ ತೆರಳಿದರು.