ಬೆಂಗಳೂರು: ಜೆಡಿಎಸ್ನವರಿಗೆ ಆತ್ಮವೇ ಇಲ್ಲ. ಇನ್ನು ಆತ್ಮಸಾಕ್ಷಿಯ ಮತ ಎಲ್ಲಿಂದ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ನವರು ತಮ್ಮ ಗೆಲುವಿಗಾಗಿ ಬೇರೆ ಬೇರೆ ಪ್ರಯತ್ನ ಮಾಡಿದರು.
ಆದರೆ ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ ಎಂದರು.ಎಲ್ಲರೂ ತಾವು ಗೆಲ್ಲುವುದಕ್ಕಾಗಿಯೇ ಸ್ಪರ್ಧಿಸುತ್ತೇವೆ ಎನ್ನುತ್ತಾರೆ, ಸೋಲುತ್ತೇವೆ ಎಂದು ಯಾರೂ ಹೇಳುವುದಿಲ್ಲ. ಜೆಡಿಎಸ್ಗೆ ಅಗತ್ಯ ಸಂಖ್ಯಾಬಲದಷ್ಟು ಮತಗಳು ಇರಲಿಲ್ಲ. ಹೀಗಾಗಿ ಅಭ್ಯರ್ಥಿಯನ್ನು ಅವರು ಕಣಕ್ಕಿಳಿಸುವುದು ಅಗತ್ಯವಿರಲಿಲ್ಲ. ಆದರೂ ಸ್ಪರ್ಧೆ ಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಪಕ್ಷದ ಎಲ್ಲಾ ಶಾಸಕರೂ ಪಕ್ಷನಿಷ್ಠರಾಗಿದ್ದಾರೆ. ಹೋಟೆಲ್ನಿಂದ ನೇರವಾಗಿ ಇಲ್ಲಿಗೆ ಬಂದು ಮತ ಹಾಕಿದ್ದಾರೆ. ಜೆಡಿಎಸ್ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದಾಗಿ ಚುನಾವಣೆ ನಡೆಯಬೇಕಾದ ಪರಿಸ್ಥಿತಿ ಎದುರಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು. ತಮ್ಮ ಅಭ್ಯರ್ಥಿಗೆ ಆತ್ಮಸಾಕ್ಷಿ ಮತ ದೊರೆಯುತ್ತವೆ ಎಂದು ಜೆಡಿಎಸ್ ನಾಯಕರು ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಜೆಡಿಎಸ್ನವರಿಗೆ ಆತ್ಮವೇ ಇಲ್ಲ, ಇನ್ನು ಸಾಕ್ಷಿ ಎಲ್ಲಿಂದ ಬರಬೇಕು? ಜಾತ್ಯತೀತ ಎಂದು ಹೆಸರಿಟ್ಟುಕೊಂಡು ಈಗ ಯಾರ ಜೊತೆ ಸೇರಿದ್ದಾರೆ? ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಮೇಲೆ ಅವರಿಗೆ ಆತ್ಮ ಎಲ್ಲಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಗೆ ರಾಜ್ಯಸಭೆ ಚುನಾವಣೆಯಲ್ಲಿ 3 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಷ್ಟು ಸಂಖ್ಯಾಬಲ ಇದೆ. ಹೀಗಾಗಿ ಬೇರೆ ಪಕ್ಷದವರಿಗೆ ಆಸೆ, ಆಮಿಷ ತೋರಿಸಿ ಸೆಳೆದುಕೊಳ್ಳುವ ಅಗತ್ಯ ಇಲ್ಲ. 134 ಶಾಸಕರು , ಒಂದು ಸ್ವತಂತ್ರ ಒಳಗೊಂಡಂತೆ 135 ಸಂಖ್ಯಾಬಲವಿದೆ. ಅದರ ಜೊತೆಗೆ ಪಕ್ಷೇತರರಾದ ಲತಾ ಮಲ್ಲಿಕಾರ್ಜುನ್, ಪುಟ್ಟಸ್ವಾಮಿಗೌಡ ಕಾಂಗ್ರೆಸ್ ಬೆಂಬಲಿಸಿದ್ದಾರೆ.
ಜನಾರ್ದನ ರೆಡ್ಡಿ ಕೂಡ ನಮಗೆ ಮತ ಹಾಕುತ್ತಿದ್ದಾರೆ. ಜೆಡಿಎಸ್ ಅಥವಾ ಬಿಜೆಪಿಯ ಶಾಸಕರಿಗೆ ಆಮಿಷವೊಡ್ಡುವ ಅಗತ್ಯ ನಮಗಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಶಾಸಕರಿಂದ ಅಡ್ಡಮತದಾನವಾಗಲಿದೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಬಿಜೆಪಿಯವರು ಮೊದಲು ತಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.