ಚಿಕ್ಕಬಳ್ಳಾಪುರ: ಆರೋಗ್ಯದ ಮಹತ್ವ ಗೊತ್ತಾಗುವುದು ಒಮ್ಮೆ ಆರೋಗ್ಯವನ್ನು ಕಳೆದುಕೊಂಡಾಗ ಅದರ ಬೆಲೆ ತಿಳಿಯುತ್ತದೆ, ಕ್ಯಾನ್ಸರ್ ಎನ್ನುವುದು ಮರಣಾಂತಿಕ ಕಾಯಿಲೆ ಇದನ್ನು ಪ್ರಾರಂಭದಲ್ಲೇ ಗುರುತಿಸಿದರೆ ಚಿವುಟಿ ಹಾಕಬಹುದು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಚಿಕ್ಕಬಳ್ಳಾಪುರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಅಸಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ಜಿಲ್ಲಾಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್, ಪುರುಷರಲ್ಲಿಯು ಸಹ ಹೀಗೆ ಹಲವಾರು ರೀತಿಯ ಕ್ಯಾನ್ಸರ್ ಗಳು ಕಂಡುಬರುತ್ತವೆ,ಇವುಗಳಿಗೆ ಕಡಿವಾಣಹಾಕಬೇಕು ಎಂದರೆ ಯೋಗ,ಉತ್ತಮ ಆಹಾರಭ್ಯಾಸಗಳು, ವ್ಯಾಯಾಮ, ನಡಿಗೆ, ವೈದ್ಯರು ನೀಡುವ ಆಹಾರ ಪದ್ಧತಿಯ ಸಲಹೆಗಳು ಪಾಲಿಸುವ ಜೊತೆಗೆ ಸಕಾಲದಲ್ಲಿ ಆರೋಗ್ಯ ಪರೀಕ್ಷೆಗಳನ್ನು ಮಾಡಿಸಬೇಕು,
ಪ್ರಾರಂಭದಲ್ಲೇ ಇಂತಹ ಕಾಯಿಲೆಗಳು ಕಂಡುಕೊಂಡರೆ ಚಿಕಿತ್ಸೆಯನ್ನು ನೀಡಿ ವಾಸಿ ಮಾಡಿದರೆ ಆ ವ್ಯಕ್ತಿಯ ಕುಟುಂಬವು ಸಮಾಜದಲ್ಲಿ ಬದುಕಲಿಕ್ಕೆ ಅವಕಾಶವಾಗುತ್ತದೆ.ಜಪಾನ್ ದೇಶದಲ್ಲಿ ಅತಿ ಹೆಚ್ಚು ಜೀವಿತಾವಧಿಯನ್ನು ಆ ದೇಶದ ಜನರಲ್ಲಿ ನೋಡಬಹುದು.ಕಾರಣ ಅಲ್ಲಿನ ಜನರು ಸದಾ ಚಟುವಟಿಕೆಯಲ್ಲಿ ತೊಡಗಿರುತ್ತಾರೆ, ನಮ್ಮ ಆರೋಗ್ಯವನ್ನು,ಮನಸ್ಸನ್ನು, ಸಂತೋಷವನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಯಾವುದೇ ಕೆಲಸ ಕಾರ್ಯಗಳನ್ನೂ ಮಾಡುವುದಾದರೆ ಅದನ್ನು ಒತ್ತಡಗಳಿಂದ ಮಾಡಬಾರದು, ಉಲ್ಲಾಸದಿಂದ ಮಾಡಬೇಕು, ಭಾರತದಲ್ಲಿ ಅನೇಕ ಜನರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ಅದರಲ್ಲೂ ಸೆಲೆಬ್ರಿಟಿಗಳಾದ ಯುವರಾಜ್ ಸಿಂಗ್ ಮತ್ತು ಸೋನಾಲಿ ಬೇಂದ್ರೆ ಸಹ ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿದ್ದಾರೆ ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ಎಸ್.ಮಹೇಶ್ ಕುಮಾರ್ ಅವರು ಮಾತನಾಡಿ, ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತಿದ್ದು ಇದರ ಮುಖ್ಯ ಉದ್ದೇಶ ಸಾರ್ವಜನಿಕರಲ್ಲಿ ಕ್ಯಾನ್ಸರ್ ಕಾಯಿಲೆ ನಿಯಂತ್ರಣ, ಮುನ್ನೆಚ್ಚರಿಕೆ ಬಗ್ಗೆ ಜಾಗೃತಿ ಮೂಡಿಸುವುದು, ಆರಂಭದಲ್ಲೇ ಕ್ಯಾನ್ಸರನ್ನು ಶೀಘ್ರವಾಗಿ ಪತ್ತೆಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆಯನ್ನು ನೀಡಬಹುದು.ಭಾರತದಲ್ಲಿ ಶೇಕಡ 70 ರಷ್ಟು ಕ್ಯಾನ್ಸರ್ ಸಂಬಂಧಿತ ಸಾವುಗಳು ಪತ್ತೆ ಹಚ್ಚದೇ ಇರುವುದರಿಂದ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಸರಿಯಾದ ಸಮಯಕ್ಕೆ ಪಡೆಯದೆ ಇರುವುದರಿಂದ ಆಗುತ್ತಿವೆ.
ಕರ್ನಾಟಕದಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಶೇ.29ರಷ್ಟು, ಗರ್ಭಕೋಶ ಕ್ಯಾನ್ಸರ್ ಶೇ 10ರಷ್ಟು, ಅಂಡಾಶಯ ಶೇ 5.9 ರಷ್ಟು ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುತ್ತದೆ.ಪುರುಷರಲ್ಲಿ ಶ್ವಾಸಕೋಶ ಕ್ಯಾನ್ಸರ್ 12.5ರಷ್ಟು, ಬಾಯಿ ಕ್ಯಾನ್ಸರ್ 6.4ರಷ್ಟು ಮತ್ತು ಫಾಸ್ಟ್ ರೇಟ್ ಕ್ಯಾನ್ಸರ್ ಕಂಡುಬರುತ್ತವೆ, 30 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರು ಕ್ಯಾನ್ಸರ್ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಬೇಕು.
ತಂಬಾಕು ಸೇವನೆಯನ್ನು ತ್ಯಜಿಸುವುದು, ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದು.ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಆರೋಗ್ಯವಂತ ಜಿಲ್ಲೆ ಮತ್ತು ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಕೂಡ ಸಹಕರಿಸಬೇಕು ಎಂದು ತಿಳಿಸಿದರು.
ಜಾಗೃತಿ ಜಾಥಾವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾವನ್ನು ಜಿಲ್ಲಾಸ್ಪತ್ರೆ ಆವರಣದಿಂದ ಎಂ. ಜಿ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ಭವನದ ಮುಂಭಾಗ, ಶಿಡ್ಲಘಟ್ಟ ವೃತ ತಲುಪಿ ಮರಳಿ ಜಿಲ್ಲಾಸ್ಪತ್ರೆ ಆವರಣದವರೆಗೂ ಸಾಗಿತು.
ಈ ಸಂದರ್ಭದಲ್ಲಿ ನಿವಾಸಿ ವೈದ್ಯ ಡಾ. ರಮೇಶ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಮಂಜುಳಾದೇವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕೃಷ್ಣಪ್ರಸಾದ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜಿ. ಹರೀಶ್, ತಾಲೂಕು ವೈದ್ಯಾಧಿಕಾರಿ ಡಾ.ಮಂಜುಳಾ, ಪತಂಜಲಿ ಟ್ರಸ್ಟ್ ಸದಸ್ಯರು, ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು, ಮತ್ತು ಆರೋಗ್ಯ ಇಲಾಖೆಯ ಸಿಬಬಂದಿಗಳು ಹಾಜರಿದ್ದರು.