ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮಟ್ಟದ ದಿನಪತ್ರಿಕೆಗಳು ಮತ್ತು ಪ್ರಾದೇಶಿಕ ಪತ್ರಿಕೆಗಳ ಸಮಸ್ಯೆಗಳ ಕುರಿತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಗೆ ಗುರುವಾರ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಮನವಿ ಸಲ್ಲಿಸಿತು.
ಮನವಿ ಸ್ವೀಕರಿಸಿ ಮಾತನಾಡಿದ ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ಕುಮಾರ್ ನಿಂಬಾಳ್ಕರ್ ಅವರು, ಜಾಹೀರಾತು ಸಂಸ್ಥೆಗಳ ಮೂಲಕ ಬಿಡುಗಡೆ ಆಗುವ ವಾರ್ತಾ ಇಲಾಖೆಯ ಜಾಹೀರಾತುಗಳಿಗೆ, ಪತ್ರಿಕೆಯಲ್ಲಿ ಪ್ರಕಟಗೊಂಡ ದಿನಾಂಕದಿಂದ 3 ತಿಂಗಳದೊಳಗೆ ಹಣ ಪಾವತಿ ಮಾಡದಿದ್ದರೆ, ಅಂತಹ ಜಾಹೀರಾತು ಸಂಸ್ಥೆಗಳಿಗೆ ಕಮಿಷನ್ ರದ್ದುಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ನಂತರ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರು ಮಾತನಾಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮಟ್ಟದ ದಿನಪತ್ರಿಕೆಗಳು ಮತ್ತು ಪ್ರಾದೇಶಿಕ ಪತ್ರಿಕೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಪ್ರಜಾಪ್ರಭುತ್ವದ 4ನೇ ಅಂಗವೆಂದು ಹೇಳುವ ಪತ್ರಿಕಾ ರಂಗ ಇತ್ತೀಚಿನ ದಿನಗಳಲ್ಲಿ ಬಡವಾಗುತ್ತಿದೆ. ಪತ್ರಿಕೆಗಳ ಬೆಳವಣಿಗೆಗೆ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದರೂ ಸಹ ಅವುಗಳಿಂದ ಪತ್ರಿಕೆಗಳ ಬೆಳವಣಿಗೆ ಆಗುತ್ತಿಲ್ಲ ಎಂದರು.
ಆದ್ದರಿಂದ ಪತ್ರಿಕೆಗಳ ಏಳಿಗೆಗೆ ಸರ್ಕಾರದ ಸಹಾಯ ಮತ್ತು ಸಹಕಾರ ಅತ್ಯವಶ್ಯಕವಾಗಿದೆ, ಈ ನಿಟ್ಟಿನಲ್ಲಿ ಸಂಘದ ಪ್ರಮುಖ ಮತ್ತು ನೈಜ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲಾಯಿತು ಎಂದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ, ರಾಜ್ಯ ಖಜಾಂಚಿ ಖಾನ್ ಸಾಬ್ ಮೋಮಿನ್, ರಾಜ್ಯ ಉಪಾಧ್ಯಕ್ಷರುಗಳಾದ ಮಂಜುನಾಥ ಬಿ.ಅಬ್ಬಿಗೆರೆ, ಜಿ.ವೈ.ಪದ್ಮಾ, ಭೀಮರಾಯ ಹದ್ದಿನಾಳ, ಮಹ್ಮದ್ ಯೂನುಸ್ , ಕಾರ್ಯದರ್ಶಿಗಳಾದ ವಿ.ಅನೂಪ್ಕುಮಾರ್, ಹೆಚ್.ನರಸಿಂಹ ರಾಜು, ಓ.ಮಲ್ಲೇಶ್ ,
ಸಹ ಕಾರ್ಯದರ್ಶಿಗಳಾದ ಡಾ.ಕೆ.ಎಂ.ಸ್ವಾಮಿ, ಗುರುಬಸಯ್ಯ ಸ್ವಾಮಿ, ಜಂಟಿ ಕಾರ್ಯದರ್ಶಿಗಳಾದ ದಿನೇಶ ಬಿ, ಹೆಚ್. ಸುಧಾಕರ, ಹಿರೋಜಿ ಎಂ. ಮಾವರಕರ ಲೋಕ ವಾರ್ತೆ ಪತ್ರಿಕೆ ಬೆಳಗಾಂವ. ಮಲ್ಲಿಕಾರ್ಜುನ ನಾಯಕ್, ಗುರುರಾಜ ಕದಮ, ಅರುಣಾ ಜ್ಯೋತಿ, ಅಮನ್ ಕೊಡಗಲಿ, ನೂರ್ ಅಹ್ಮದ್, ಜಗದೀಶ ಗದಗ, ಸಚೇಂದ್ರ ಲಂಬು, ಲಕ್ಷ್ಮಣ ರಾವ್ ಕಪಗಲ್, ರಘುವೀರ ನಾಯಕ, ಶಿವಶಂಕರ ಮಂಡ್ಯ, ಮಲ್ಲಿಕಾರ್ಜುನ ಯಾದಗಿರಿ, ಮನೋಹರ ಬೆಳಗಾವಿ, ಸೇರಿದಂತೆ ಇನ್ನಿತರ ಸಂಪಾದಕರು ಭಾಗವಹಿಸಿದ್ದರು.
ಪ್ರಮುಖ ಬೇಡಿಕೆಗಳು ಯಾವುವು…?
ಜಾಹೀರಾತು ದರಕ್ಕೆ ಶೇ.12 ರಷ್ಟು ಜಾಹೀರಾತು ದರವನ್ನು ಕೂಡಲೇ ಹೆಚ್ಚಳ ಮಾಡಬೇಕು.
ಪತ್ರಿಕೆಗಳಿಗೆ ಬಾಕಿ ಜಾಹೀರಾತುಗಳನ್ನು ಬಿಡುಗಡೆ ಮಾಡಬೇಕು.
2023-2024ನೇ ಸಾಲಿನ ಇಲ್ಲಿಯವರೆಗೆ ಬಾಕಿ ಇರುವ ಎಲ್ಲಾ ಬಗೆಯ ಜಾಹೀರಾತುಗಳ ಹಣ ಪಾವತಿಗೆ ಅನುದಾನ ಬಿಡುಗಡೆ ಮಾಡಬೇಕು.
ಇಲಾಖೆಯ ಅಂಗೀಕೃತ ಜಾಹೀರಾತು ಸಂಸ್ಥೆಗಳು ಪಾವತಿಸಬೇಕಾದ ಜಾಹೀರಾತು ಬಿಲ್ಗಳ ಬಾಕಿ ಹಣವನ್ನು ಪಾವತಿ ಮಾಡಿಸುವುದಕ್ಕೆ ಕ್ರಮಕೈಗೊಳ್ಳಬೇಕು.
ರಾಜ್ಯ ಮಟ್ಟದ ಪತ್ರಿಕೆಗಳಿಗೆ ಬಿಡುಗಡೆ ಮಾಡುವ ಆಕರ್ಷಕ ಜಾಹೀರಾತುಗಳನ್ನು ಜಿಲ್ಲಾಮಟ್ಟದ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಯಾವುದೇ ತಾರತಮ್ಯ ಆಗದಂತೆ ಬಿಡುಗಡೆ ಮಾಡಬೇಕು.
ಸರ್ಕಾರದ ಇಲಾಖೆಗಳು ಮತ್ತು ನಿಗಮ, ಮಂಡಳಿ ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳು ಕರೆಯುವ ಕಾಮಗಾರಿಗಳ ಮೌಲ್ಯಕ್ಕೆ ತಕ್ಕಂತೆ ಬಿಡಿಬಿಡಿ ಟೆಂಡರ್ಗಳನ್ನು ಅನ್ವಯವಾಗುವ ಪತ್ರಿಕೆಗಳಿಗೆ ಬಿಡುಗಡೆ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು.
ಇಲಾಖೆಯಿಂದ ಏಜೆನ್ಸಿಗಳಿಗೆ ಜಾಹೀರಾತು ಬಿಲ್ಗಳ ಪಾವತಿ ಆಗಿದ್ದರೂ, ಕೆಲವು ಏಜೆನ್ಸಿಗಳು ಹಣ ಪಾವತಿ ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಅಂತಹ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳಬೇಕು.