This is the title of the web page
This is the title of the web page

ಭ್ರಷ್ಟಾಚಾರಿಗಳಿಗಿಂತ ಕೋಮುವಾದಿಗಳು ಹೆಚ್ಚು ಅಪಾಯಕಾರಿ ಕೋಮುವಾದಿ ಜಾತಿವಾದಿ ಬಿಜೆಪಿಯನ್ನು ಸೋಲಿಸುವ ಸಮರ್ಥ ಅಭ್ಯರ್ಥಿಗೆ ಮತ ನೀಡಿ

ದೊಡ್ಡಬಳ್ಳಾಪುರ: ಕೋಮುವಾದಿ, ಜಾತಿವಾದಿ ಬಿಜೆಪಿ ಪಕ್ಷವನ್ನು ಸೋಲಿಸುವ ಸಮರ್ಥ ಅಭ್ಯರ್ಥಿಗೆ ಮತಹಾಕಿ. ಪ್ರಜಾಪ್ರಭುತ್ವದಲ್ಲಿ ಮತದಾನದಿಂದ ಮಾತ್ರ ಯಾವುದೇ ಒಂದು ಜನವಿರೋಧಿ ಆಡಳಿತವನ್ನು ಮಣಿಸಲು ಸಾಧ್ಯ ಎಂದು ರಾಷ್ಟ್ರಕವಿ ಕುವೆಂಪು ಹೋರಾಟ ವೇದಿಕೆಯ ಮುಖಂಡರಾದ ಬೆಳವಂಗಲ ಪ್ರಭಾ ಅವರು ಹೇಳಿದರು.

ನಗರ ಕನ್ನಡ ಜಾಗೃತ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ವಿಧಾನ ಸಭಾ
ಕ್ಷೇತ್ರದಲ್ಲಿ ಎಂದೂ ಧರ್ಮ, ಜಾತಿ ಆಧಾರದ ಮೇಲೆ ಮತದಾನ ನಡೆದಿಲ್ಲ. ಇಲ್ಲಿನ ಮತದಾರರ ಮನಸ್ಥಿತಿಯೇ ಜಾತ್ಯಾತೀತವಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ದಲಿಂಗಯ್ಯ, ಎಚ್.ಮುಗುವಾಳಪ್ಪ, ವಿಶ್ವಮಟ್ಟದ ಚಿಂತಕ ಡಿ.ಆರ್.ನಾಗರಾಜ್ ಅವರಂತಹ ಮಹಾನ್ ನಾಯಕರು ಹಲವಾರು ಜನಪರವಾದ ಚಳುವಳಿಗಳನ್ನು ಕಟ್ಟಿಬೆಳೆಸಿರುವ ಕ್ಷೇತ್ರ ಇದಾಗಿದೆ.

ಗ್ರಾಮಗಳಲ್ಲಿ ನೆಮ್ಮದಿ ನೆಲಸಬೇಕಿದ್ದರೆ, ಪರಸ್ಪರ ಜಗಳ ತಂದಿಡುವ ಪಕ್ಷದ ಅಭ್ಯರ್ಥಿಗೆ ಮತ ನೀಡದೆ ಪ್ರಜ್ಞಾವಂತಿಕೆಯಿಂದ ಮತದಾನ ಮಾಡಬೇಕಿದೆ. ಸುಳ್ಳನ್ನೇ ಸತ್ಯದಂತೆ ಹೇಳಿ ಜನರನ್ನು ಮೆಚ್ಚಿಸುವ ಪ್ರವೃತ್ತಿಯ ಜನರಿಗೆ ಕಡಿವಾಣ ಹಾಕಬೇಕಿದೆ ಎಂದರು.ಪ್ರಗತಿಪರ ಚಿಂತಕ, ಲೇಖಕ ಡಾ.ಎಲ್.ಎನ್.ಮುಕುಂದ ರಾಜ್ ಮಾತನಾಡಿ, ನಮ್ಮೆಲ್ಲರ ಬದುಕಿನ ಪವಿತ್ರ ಗ್ರಂಥವಾಗಿರುವ ಸಂವಿಧಾನವನ್ನೇ ಬುಡಮೇಲು ಮಾಡುವಂತಹವರಿಗೆ ಮತದಾನ ಮಾಡಬಾರದು.

ರಾಷ್ಟ್ರ ಕವಿ ಕುವೆಂಪು ಅವರು ರಚಿಸಿದ ನಾಡಗೀತೆಯನ್ನೇ ತಿರುಚಿ ಬರೆದವರು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ವ್ಯಂಗ್ಯ ಮಾಡಿದವರನ್ನು ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದಂತಹ ಬಿಜೆಪಿ ಆಡಳಿತ ಮತ್ತೆ ರಾಜ್ಯದಲ್ಲಿ ಬರಬಾರದು. ನಮ್ಮೆಲ್ಲರ ಹೆಮ್ಮೆಯ ನಂದಿನಿ ಸೇರಿದಂತೆ ಕಮ್ನಡಿಗರು ಕಟ್ಟಿಬೆಳೆಸಿದ ಬ್ಯಾಂಕ್ ಗಳನ್ನು ವಿಲೀನ ಮಾಡುವ ಮೂಲಕ ಪ್ರಾದೇಶಿಕತೆಯ ಕುರುಹನ್ನೂ ಕನ್ನಡಿಗರ ಅಸ್ಮಿತೆಯನ್ಬು ನಾಶ ಮಾಡಲು ಮುಂದಾಗಿರುವ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಇರುವ ಅವಕಾಶವೇ ಮತದಾನ.

ಸ್ವಚ್ಛ ಭಾರತ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ವ್ಯರ್ಥವಾಗಿದೆ. ಆದರೆ ವಾಸ್ತದಲ್ಲಿ ಮಾತ್ರ ಏನೂ ಆಗಿಲ್ಲ. ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತ ಆಡಳಿತಕ್ಕೆ ಬರುವವರನ್ನು ತಡೆಯಬೇಕಿದೆ ಎಂದರು. ರಾಷ್ಟ್ರಕವಿ ಕುವೆಂಪು ಹೋರಾಟ ವೇದಿಕೆಯ ಸಂಚಾಲಕ ಜಗದೀಶ್ ಕೊಪ್ಪ ಮಾತನಾಡಿ, ಭ್ರಷ್ಟಾಚಾರಿಗಳಿಗಿಂತಲೂ ಕೋಮುವಾದಿಗಳು ಹೆಚ್ಚು ಅಪಾಯಕಾರಿಯಾಗಿದ್ದು. ಈ ಅಪಾಯವನ್ನು ಹಿಮ್ಮೆಟ್ಟಿಸಲು ಅಂಬೇಡ್ಕರ್ ವಾದಿ, ಗಾಂಧಿ ವಾದಿ ಮತ್ತು ಲೋಹಿಯವಾದಿಗಳು ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಲು ಸಾಧ್ಯ ಎಂದರು.

ರಾಜ್ಯ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಈ.ಬಸವ ರಾಜ್ ಮಾತನಾಡಿ, ಪ್ರಜಾಪ್ರಭುತ್ವ ಅಡಿಯಲ್ಲಿ ಆಯ್ಕೆಯಾಗಿರುವ ಶಾಸಕರನ್ನೇ ಖರೀದಿಸುವ ವಾಮ ಮಾರ್ಗವನ್ನು ರಾಜ್ಯಕ್ಕೆ ಪರಿಚಯಿಸಿದವರು ಬಿಜೆಪಿ ಮುಖಂಡರು. ನೋಟುಗಳ ಅಮಾನ್ಯೀಕರಣಕ್ಕೆ ನೀಡಿದ್ದ ಎಲ್ಲಾ ಕಾರಣಗಳು ಸಹ ಸುಳ್ಳಾಗಿವೆ. ಯುವಜನರಿಗೆ ಉದ್ಯೋಗ ಸೃಷ್ಟಿ, ವಿದೇಶದಲ್ಲಿನ ಕಪ್ಪು ಹಣ ವಾಪಸ್ ತರುವುದು ಈ ಎಲ್ಲಾ ಭರವಸೆಗಳು ಹತ್ತು ವರ್ಷಗಳಲ್ಲಿ ನಮ್ಮ ಕಣ್ಣ ಮುಂದೆಯೇ ಹುಸಿಯಾಗಿವೆ, ಆದ್ದರಿಂದ ಕೋಮುವಾದಿ ಜಾತಿವಾದಿ ಹಾಗೂ ಜನವಿರೋಧಿಗಳನ್ನು ಮತದಾನದ ಮೂಲಕ ಮಣಿಸಬೇಕಿದೆ ಎಂದರು.