ಬೆಂಗಳೂರು: ಕಾಲ್ ಗರ್ಲ್ ಬೇಕಿದ್ದರೆ ಕರೆ ಮಾಡಿ ಎಂದು ಪತ್ನಿಯ ಪೋಟೋ ಹಾಗೂ ದೂರವಾಣಿ ಸಂಖ್ಯೆಯನ್ನು ಪಾಪಿ ಪತಿಯೊಬ್ಬ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ ವಿಲಕ್ಷಣ ಘಟನೆ ನಂದಿನಿ ಲೇಔಟ್ ನಲ್ಲಿ ನಡೆದಿದೆ.
ಈ ಬಗ್ಗೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಂಪತ್ಯ ಕಲಹವೇ ಘಟನೆಗೆ ಮುಖ್ಯ ಕಾರಣ ಎಂಬುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದೆ. ಎಂದು ಪೊಲೀಸರು ತಿಳಿಸಿದ್ದಾರೆ.ನಂದಿನಿ ಲೇಔಟ್ ವ್ಯಾಪ್ತಿಯ ಸತ್ಯನಾರಾಯಣ ರೆಡ್ಡಿ ಮತ್ತು ಆತನ ಪತ್ನಿ ಮಧ್ಯೆ ದಾಂಪತ್ಯ ಕಲಹವಿತ್ತು. 2019ರಲ್ಲಿ ವಿವಾಹವಾಗಿದ್ದ ಈ ದಂಪತಿ ಒಂದು ವರ್ಷದಿಂದ ಬೇರೆ ಬೇರೆಯಾಗಿದ್ದಾರೆ.
ಕಳೆದ ಒಂದು ವರ್ಷದಿಂದ ಪತಿಯು ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದುದರಿಂದ ಪತ್ನಿ ಆತನಿಂದ ದೂರವಾಗಿದ್ದಳು. ಇದನ್ನೇ ನೆಪ ಮಾಡಿಕೊಂಡಿದ್ದ ಆರೋಪಿ ಪತ್ನಿ ವಿರುದ್ಧ ಸೇಡು ತೀರಿಸಲು ಸಾಮಾಜಿಕ ಮಾಧ್ಯಮ ಫೇಸ್ಬುಕ್ಕಿನಲ್ಲಿ ಫೋಸ್ಟ್ ಮಾಡಿದ್ದ ಎನ್ನಲಾಗಿದೆ.`ಕಲಾ ಶಶಿ’ ಎಂದು ಫೇಸ್ ಬುಕ್ ಪೇಜ್ ಕ್ರಿಯೇಟ್ಮಾಡಿದ್ದ ಆರೋಪಿ ಅದರಲ್ಲಿ ಪತ್ನಿಯ ದೂರವಾಣಿ ಸಂಖ್ಯೆ, ಪೋಟೋ ಮತ್ತು ಆಕೆಯ ಸಹೋದರನ ಮೊಬೈಲ್ ಸಂಖ್ಯೆ ಕೂಡ ಪೋಸ್ಟ್ ಮಾಡಿದ್ದ. ಇಷ್ಟೇ ಅಲ್ಲದೆ, ಕಾಲ್ ಗರ್ಲ್ ಬೇಕಿದ್ದಲ್ಲಿ ಸಂಪರ್ಕಿಸಿ ಎಂದು ಪೋಸ್ಟ್ ಹಾಕಿದ್ದ.
ಇದರಿಂದಾಗಿ ಸಂತ್ರಸ್ತೆ ಮತ್ತು ಆಕೆಯ ಸಹೋದರನಿಗೆ ಸಿಕ್ಕಾಪಟ್ಟೆ ಪೋನ್ ಕರೆಗಳು ಬರಲು ಆರಂಭವಾಗಿದ್ದವು.ಇದರಿಂದ ಬೇಸತ್ತ ಸಂತ್ರಸ್ತೆ ಮತ್ತು ಆಕೆಯ ಸಹೋದರ ನಂದಿನಿ ಲೇಔಟ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಆಧಾರದಲ್ಲಿಪ್ರಕರಣ ದಾಖಲಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.