ಬೆಂಗಳೂರು: ನಗರದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮಿತಿಮೀರಿದೆ. ರಾತ್ರಿ ಸಮಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಯುವತಿಯರನ್ನು ಬೈಕ್ನಲ್ಲಿ ಚೇಸ್ ಮಾಡಿಕೊಂಡು ಬಂದು ಪುಂಡರು ಕಿರುಕುಳ ನೀಡಿದ್ದಾರೆ. ದಾರಿಯುದ್ದಕ್ಕೂ ಚೇಸ್ ಮಾಡಿದ್ದಲ್ಲದೇ ಬೈಕ್ ಮೂಲಕ ಕಾರನ್ನು ಸುತ್ತುವರಿದು ಕಿರುಕುಳ ನೀಡಿದ್ದಾರೆ.
ಕಿಡಿಗೇಡಿಗಳು ಮಡಿವಾಳ, ಸೆಂಟ್ ಜಾನ್ಸ್ ಅಲ್ಲಿಂದ ಕೋರಮಂಗಲವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ.
ಇದರಿಂದ ಆತಂಕಗೊಂಡ ಮಹಿಳೆಯರು ಸಹಾಯಕ್ಕಾಗಿ ಕೂಡಲೇ 112 ಗೆ ಸಹಾಯವಾಣಿಗೆ ಕರೆ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಯುವತಿಯರು ಇದ್ದ ಜಾಗಕ್ಕೆ ಬಂದಿದ್ದಾರೆ. ಪೊಲೀಸರನ್ನು ಕಂಡೊಡನೆ ಪುಂಡರು ಪರಾರಿಯಾಗಿದ್ದಾರೆ.
ಈ ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಇಬ್ಬರು ಯುವತಿಯರು ಕಾರಿನಲ್ಲಿ ಮಡಿವಾಳ ಕಡೆಯಿಂದ ಕೋರಮಂಗಲ ಕಡೆ ಹೊರಟಿದ್ದರು. ಆ ವೇಳೆ ಕಾರಿನಲ್ಲಿದ್ದ ಯುವತಿಯರ ಜತೆ ಜಗನ್ನಾಥ್, ತೇಜಸ್, ಮತ್ತು ಕಣ್ಣನ್ ಎಂಬುವವರು ಕಿರಿಕ್ ಶುರು ಮಾಡಿದ್ದರು. ಈ ಮೂವರು ಬೈಕ್ನಲ್ಲಿ ಹೋಗುತ್ತಿದ್ದಾಗ, ಕಾರನ್ನು ಹಿಂಬಾಲಿಸಿ ಕೀಟಲೆ ಮಾಡಿದ್ದಾರೆ.