ಕುಣಿಗಲ್: ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಎಚ್ ಡಿ ರಂಗನಾಥ್ ರವರಿಂದ ಸೋಲನ್ನು ಅನುಭವಿಸಿರುವ ವಿರೋಧಪಕ್ಷಗಳ ಮುಖಂಡರುಗಳು ಸೇಡಿನ ರಾಜಕಾರಣ ಮಾಡುತ್ತಿರುವುದು ಖಂಡನಿಯ ಎಂದು ಕಾಂಗ್ರೆಸ್ ಯುವ ಮುಖಂಡ ಮುನಿಯಪ್ಪ ಆರೋಪ ಮಾಡಿದ್ದಾರೆ.
ಕುಣಿಗಲ್ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕುಣಿಗಲ್ ಪಟ್ಟಣದಲ್ಲಿರುವ ಕುಣಿಗಲ್ ಕುದುರೆ ಫಾರಂ ಸ್ಥಳಾಂತರ ಮಾಡುವುದಾಗಲಿ ರದ್ದು ಮಾಡುವುದಾಗಲಿ ನಮ್ಮ ಉದ್ದೇಶವಿಲ್ಲ, ಕುಣಿಗಲ್ ಫಾರಂ ಉಳಿಸಿಕೊಂಡು ಉಳಿಕೆ ಜಾಗದಲ್ಲಿ ರೇಸ್ ಕೊರ್ಸ್ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದೆಂದು ಮಾನ್ಯ ಸಂಸದರಾದ ಡಿಕೆ ಸುರೇಶ್ ರವರು ಹಾಗೂ ಶಾಸಕರಾದ ಎಚ್ ಡಿ ರಂಗನಾಥ್ ರವರು ಈಗಾಗಲೇ ಸ್ಪಷ್ಟನೆ ನೀಡಿದ್ದರೂ ಸಹ ಕುಣಿಗಲ್ ಸ್ಟಡ್ ಫಾರಂ ಸ್ಥಳಾಂತರ ಮಾಡುತ್ತಿದ್ದಾರೆಂದು ಜನರಿಗೆ ಗೊಂದಲ ಉಂಟು ಮಾಡುತ್ತಿರುವ ವಿರೋಧ ಪಕ್ಷದವರ ನಡೆ ಖಂಡನೀಯವಾಗಿರುತ್ತದೆ,
ಅಲ್ಲದೆ ಶಾಸಕರ ಹಾಗೂ ಸಂಸದರ ವಿರುದ್ಧ ಪ್ರತಿಭಟನೆಯ ಹೇಳಿಕೆಗಳು ನೀಡುತ್ತಿದ್ದಾರೆ. ಆದರೆ ಕುಣಿಗಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಅಪಾರ ಜನಬೆಂಬಲ ಹೊಂದಿರುವ ಸಂಸದರು ಹಾಗೂ ಶಾಸಕರ ಹಿಂದೆ ಜನ ಸಾಗರವೇ ಇದ್ದು ವಿರೋಧ ಪಕ್ಷದ ಮುಖಂಡರುಗಳ ಸೇಡಿನ ರಾಜಕಾರಣದ ವಿರುದ್ಧ ನಾವು ಸಹ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು,
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭಪಡೆಯುವ ಉದ್ದೇಶದಿಂದ ಪಿತೂರಿ ನಡೆಸುತ್ತಿರುವ ಜೆ ಡಿ ಎಸ್ ಹಾಗೂ ಬಿ ಜೆ ಪಿ ಪಕ್ಷದವರ ಉದ್ದೇಶ ಸಫಲ ವಾಗುವುದಿಲ್ಲ ಕುಣಿಗಲ್ ಕ್ಷೇತ್ರದಲ್ಲಿ ಡಿಕೆ ಸುರೇಶ್ ರವರಿಗೆ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಮತದಾರರು ಉತ್ಸುಕಾರಾಗಿದ್ದಾರೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಎಸ್ ಸಿ ಎಸ್ಟಿ ಕುಣಿಗಲ್ ಬ್ಲಾಕ್ ಅಧ್ಯಕ್ಷ ಜೈ ಕುಮಾರ್, ಕಾಂಗ್ರೆಸ್ ಯುವಮುಖಂಡರುಗಳಾದ ಗ್ಯಾಸ್ ಮೂರ್ತಿ, ಚಂದನ್, ಇರ್ಫಾನ್, ಬಿಳಿದೇವಾಲಯ ರಾಮಕೃಷ್ಣಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.